ಬೆಳ್ತಂಗಡಿ : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆಯು ಸೋಮವಾರ ನಡೆಯಿತು.
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ರಘೋತ್ತಮ ಆಚಾರ್ಯ ಶಂಖನಾದ ಮಾಡುವ ಮೂಲಕ ಮತ್ತು ಗಣ್ಯರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ವೇದಮೂರ್ತಿ ಕಂಠೀರವ ನವಾತೆ ಮತ್ತು ಪುರುಷೋತ್ತಮ ಮರಾಠೆ ವೇದ ಮಂತ್ರ ಪಠಣವನ್ನು ಮಾಡಿದರು.
ಸನಾತನ ಸಂಸ್ಥೆಯ ಲಕ್ಷ್ಮೀ ಪೈ ಮಾತನಾಡಿ, ಭಾರತ ದೇಶ ಜಾತ್ಯತೀತ ಹೆಸರಿನಲ್ಲಿ ಸಮಾನತೆ ತರಲು ಪ್ರಯತ್ನ ಮಾಡುತ್ತಿದೆ. ಆದರೆ ಸಮಾನತೆ ಎಲ್ಲಿಯೂ ಕಾಣುತ್ತಿಲ್ಲ. ಅಲ್ಪ ಸಂಖ್ಯಾತರಿಗಾಗಿ ವಿಶೇಷ ಆಯೋಗಗಳನ್ನು ನಿರ್ಮಿಸಲಾಗುತ್ತಿದೆ ಆದರೆ ಹಿಂದುಗಳಿಗೆ ಯಾವುದೇ ಆಯೋಗ ಇಲ್ಲ. ಸಂವಿಧಾನದಲ್ಲಿ ೨೮ನೇ ಕಲಂ ನಲ್ಲಿ ಧರ್ಮ ಶಿಕ್ಷಣಕ್ಕೆ ಅವಕಾಶ ಇಲ್ಲ ಎಂದು ಹೇಳಲಾಗಿದೆ ಆದರೆ ೩೦ನೇ ಕಲಂ ನಲ್ಲಿ ಮದರಸದಲ್ಲಿ, ಕಾನ್ವೆಂಟ್ ನಲ್ಲಿ ನೀಡಬಹುದು ಎಂದು ಹೇಳಲಾಗಿದೆ. ಅವರಿಗೆ ಅನುದಾನ ನೀಡಲು ಅಭ್ಯಂತರ ಇಲ್ಲ .ಆದರೆ ಹಿಂದುಗಳಿಗೆ ವೇದ ಪಾಠಶಾಲೆಯಲ್ಲಿ ಧರ್ಮ ಶಿಕ್ಷಣ ನೀಡಿದರೆ ಸರಕಾರದಿಂದ ಅನುದಾನ ಸಿಗುವುದಿಲ್ಲ.
ಇದಕ್ಕಾಗಿ ಧರ್ಮಾಧಿಷ್ಠಿತ ಸಮಾಜ ಸ್ಥಾಪನೆ ಯಾಗಲು ಭಾರತ ಹಿಂದೂ ರಾಷ್ಟ್ರವಾಗಬೇಕು. ಹಿಂದೂ ರಾಷ್ಟ್ರದ ಚಳುವಳಿಯನ್ನು ಮುಂದೆ ಕೊಂಡೊಯ್ಯಬೇಕಾದರೆ ಅದಕ್ಕೆ ಭಗವಂತನ ಅಧಿಷ್ಠಾನ ಬೇಕು. ಶಾರೀರಿಕ ಮತ್ತು ಮಾನಸಿಕ ಬಲಕ್ಕಿಂತ ಆಧ್ಯಾತ್ಮಿಕ ಬಲವು ಅತಿ ಶ್ರೇಷ್ಠವಾಗಿದೆ. ಪಾಂಡವರು ಐದೇ ಮಂದಿ ಇದ್ದರೂ ಅವರು ತಮಗಿಂತ ಸಂಖ್ಯಾಬಲ ಮತ್ತು ಶಸ್ತ್ರ ಬಲ ಹೆಚ್ಚಿರುವ ಕೌರವರನ್ನು ಸೋಲಿಸಿದರು. ಇದರ ಕಾರಣ ಪಾಂಡವರ ಬೆನ್ನ ಹಿಂದೆ ಸಾಕ್ಷಾತ್ ಜಗದ್ಗುರು ಭಗವಾನ್ ಶ್ರೀ ಕೃಷ್ಣನಿದ್ದನು. ಆದ್ದರಿಂದ ಹಿಂದೂ ರಾಷ್ಟ್ರ ಕಾರ್ಯ ಮಾಡುವಾಗ ಸಂಖ್ಯಾಬಲ ಇದು ನಮ್ಮ ಶಸ್ತ್ರವಾಗಿದೆ ಎಂಬ ಭ್ರಮೆಯಲ್ಲಿ ಇರುವ ಬದಲು ಆಧ್ಯಾತ್ಮಿಕ ಸಾಮರ್ಥ್ಯವನ್ನು ಹೆಚ್ಚಿಸಿ ಭಗವಂತನ ಆಶೀರ್ವಾದ ಪಡೆದು ಕಾರ್ಯವನ್ನು ಮಾಡೋಣ ಎಂದರು.
ಕೃಷ್ಣ ಉಪಾಧ್ಯಾಯ ಮಾತನಾಡಿ, ಇತ್ತೀಚೆಗೆ ನಮ್ಮ ಭಾರತ ದೇಶವು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಏಕೆಂದರೆ ನಮ್ಮಲ್ಲಿ ಸಂಘಟಿತ ಪ್ರಯತ್ನ ಕಡಿಮೆ ಇದೆ. ಹಿಂದೂಗಳು ಸಂಘಟಿತರಾಗಿದ್ದರೆ ಯಾರಿಂದಲೂ ಎದುರಿಸಲು ಸಾಧ್ಯವಿಲ್ಲ ಎಂದು ಇತಿಹಾಸದಿಂದ ಕಲಿತಿದ್ದೇವೆ. ಬ್ರಿಟಿಷರು ನಮ್ಮನ್ನು ಸಂಘಟಿತರಾಗದAತೆ ವಿಭಜನೆ ಮಾಡಿ ನಮ್ಮನ್ನು ದೀರ್ಘಕಾಲದ ವರೆಗೆ ಆಳ್ವಿಕೆ ಮಾಡಿದರು. ಇದಕ್ಕಾಗಿ ನಾವೆಲ್ಲರೂ ಹಿಂದೂಗಳು ಒಟ್ಟಾಗಬೇಕು ಮತ್ತು ಸಮಯ ಕೊಡಬೇಕು, ಹಾಗೂ ಎಲ್ಲರೂ ಹಿಂದೂ ಧರ್ಮದ ಅರಿವು ಮೂಡಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಮನ್ವಯಕರಾದ ವಿಜಯಕುಮಾರ್ ಮಾತನಾಡಿ, ಹಿಂದೂಗಳು ಹಿಂದೂ ಧರ್ಮದ ಆಚರಣೆ ಮಾಡದೇ ಇರುವುದರಿಂದ ಇವತ್ತು ಹಿಂದೂ ಹೆಣ್ಣುಮಕ್ಕಳು ಲವ್ ಜಿಹಾದಿಗೆ ಗುರಿಯಾಗುತ್ತಿದ್ದಾರೆ. ಹಿಂದೂ ರಾಷ್ಟ್ರದ ಪರಿಕಲ್ಪನೆ ಯಾವ ರೀತಿ ಇದೆ ಮತ್ತು ಲವ್ ಜಿಹಾದನ ಭೀಕರತೆಯನ್ನು ಹಲವಾರು ನೈಜ ಘಟನೆಗಳ ಮುಖಾಂತರ ತಿಳಿಯಪಡಿಸಿದರು. ಹಿಂದುಗಳಿಗೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಧರ್ಮ ಶಿಕ್ಷಣದ ಅವಶ್ಯಕತೆ ಇದೆ ಎಂದರು
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸಮನ್ವಯಕರಾದ ಪವಿತ್ರ ಕುಡ್ವ, ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಸಮಿತಿಯ ಶಶಿಧರ ಮಾಕಳ, ದಾಮೋದರ, ಸನಾತನ ಸಂಸ್ಥೆಯ ಆನಂದ ಗೌಡ, ಧರ್ಮ ಪ್ರೇಮಿಗಳಾದ ವಸಂತ ಉಜಿರೆ, ಧರ್ಮಸ್ಥಳ ಜಮಾ ಉಗ್ರಾಣ ಮುತ್ಸದ್ಧಿ ಹಾಗೂ ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರಾದ ಭುಜಬಲಿ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು.
ಹಿಂದೂ ಜನಜಾಗೃತಿ ಸಮಿತಿಯ ಹರೀಶ್ ಮುದ್ದಿನಡ್ಕ ಮತ್ತು ಕು. ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.