ಕಾರ್ಕಳ : ಅತ್ತೂರು ಸೈಂಟ್ ಲಾರೆನ್ಸ್ ಹೈಸ್ಕೂಲ್ನ ಹಳೆ ವಿದ್ಯಾರ್ಥಿಗಳು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದೊಂದು ಮಾದರಿ ಕಾರ್ಯಕ್ರಮವಾಗಿ ಮೂಡಿ ಬಂದಿದೆ.
1979-80ರ ಬ್ಯಾಚ್ನ ವಿದ್ಯಾರ್ಥಿಗಳು ಪ್ರಸ್ತುತ ವೃತ್ತಿ ಬದುಕಿನಲ್ಲಿ ನಿವೃತ್ತಿ ಪಡೆದಿರಬಹುವುದು ಅಥವಾ ನಿವೃತ್ತಿ ಅಂಚಿನಲ್ಲೂ ಇರಬಹುದು. ಅವರೆಲ್ಲರೂ ಒಂದೆಡೆ ಸೇರಿಕೊಂಡು ಒಂದು ನಿರ್ಧಾರ ಕೈಗೊಂಡಿದ್ದರು. ಅವರೆಲ್ಲರಿಗೂ ಪ್ರೌಢ ಶಿಕ್ಷಣವನ್ನು ನೀಡಿದ ಗುರುಗಳನ್ನು ವಿಶೇಷವಾಗಿ ಸ್ಮರಿಸುತ್ತಾ, ನೇರವಾಗಿ ಅವರ ನಿವಾಸಗಳಿಗೆ ತೆರಳಿದ್ದಾರೆ. ಆರೋಗ್ಯವನ್ನು ವಿಚಾರಿಸಿದ್ದಾರೆ. ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಿದ್ದಾರೆ.
ವೃದ್ದಾಪ್ಯದ ಇಳಿ ವಯಸ್ಸು ಅವರದ್ದು. ಆದರೂ ಅವರಲ್ಲಿರುವ ಲವಲವಿಕೆ ಅವರನ್ನು ಕಂಡಾಗಲೇ ಅರ್ಥವಾಗುತ್ತಿತ್ತು. ಬಾಲ್ಯದಲ್ಲಿ ತಿದ್ದಿತೀಡಿ ವಿದ್ಯೆ ನೀಡಿದ ಅಂದಿನ ದಿನಗಳನ್ನು ನೆನಪಾಗತೊಡಗಿತ್ತು. ಕಾರ್ಕಳ ತೆಳ್ಳಾರ್ ನಿವಾಸಿ ಅನಂತ ಕೃಷ್ಣ ಆಚಾರ್, ಅರವಿಂದ ಹೆಗ್ಡೆ ಕಾಬೆಟ್ಟು, ಬಿ.ಪಿ.ರಾಡ್ರಿಗಸ್ ಸರ್ ಮೂಡಬಿದ್ರೆ ಹೊಸಬೆಟ್ಟು ಮುಂತಾದವರನ್ನು ಅವರ ವಿದ್ಯಾರ್ಥಿಗಳು ಭೇಟಿ ಮಾಡಿದರು. ಅವರೆಲ್ಲರೂ ಕ್ಷೇಮವಾಗಿರಲಿ, ದೇವರು ಉತ್ತಮ ಆರೋಗ್ಯ ಕರುಣಿಸಲಿ ಎಂಬ ಪ್ರಾರ್ಥನೆ ನಮ್ಮದು ಎನ್ನುತ್ತಾರೆ ಹಳೆ ವಿದ್ಯಾರ್ಥಿ ನಿವೃತ್ತ ತೆರಿಗೆ ಅಧಿಕಾರಿ ಹಾಗೂ ಹಳೆ ವಿದ್ಯಾರ್ಥಿ ಜೋಕಿಂ ಪಿಂಟೋ. ಅವರ ನೇತೃತ್ವದಲ್ಲಿ ಅತ್ತೂರು ಪ್ರೌಢಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನ ನಡೆಯುತ್ತಿರುವುದು ಕೂಡಾ ಶ್ಲಾಘನೀಯ.