Share this news

ವಿಶಾಖಪಟ್ಟಣಂ: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಲು ಭಾರತ ವಿಫಲವಾಗಿದೆ.  ಮಿಚೆಲ್ ಸ್ಟಾರ್ಕ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ರನ್‌ಗಳಿಸಲೂ ಸಾಧ್ಯವಾಗಲಿಲ್ಲ. ಇತ್ತ ವಿಕೆಟ್ ಉಳಿಸಿಕೊಳ್ಳಲು ಆಗಲಿಲ್ಲ. ಇದರ ಪರಿಣಾಮ ಭಾರತ 26 ಓವರ್‌ಗಳಲ್ಲಿ 117 ರನ್‌ಗೆ ಆಲೌಟ್ ಆಗಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಸೀಸ್ ಲೆಕ್ಕಾಚಾರ ಸರಿಯಾಗಿತ್ತು. ವಿಶಾಖಪಟ್ಟಣಂ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಸವಾಲಾಗಿತ್ತು. ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಮೊದಲ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಶುಭಮನ್‌ ಗಿಲ್ ಖಾತೆ ತೆರೆಯುವ ಮುನ್ನವೇ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ 13 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.

32 ರನ್‌ಗಳಿಸುವಷ್ಟರಲ್ಲಿ ಭಾರತ 2 ಪ್ರಮುಖ ವಿಕೆಟ್ ಕಳೆದುಕೊಂಡಿತು. ಮಿಚೆಲ್ ಸ್ಟಾರ್ಕ್ ದಾಳಿ ಮತ್ತಷ್ಟು ಬಿರುಸುಗೊಂಡಿತು. ಆಸ್ಟ್ರೇಲಿಯಾ ಪ್ರತಿ ಓವರ್‌ನಲ್ಲಿ ಮೇಲುಗೈ ಸಾಧಿಸಿತು.ಭಾರತ ರನ್‌ಗಳಿಸಲು ವಿಕೆಟ್ ಉಳಿಸಿಕೊಳ್ಳಲು ಪರದಾಡಿತು. ಸೂರ್ಯಕುಮಾರ್ ಯಾದವ್ ಡಕೌಟ್ ಆದರೆ, ಕಳೆದ ಪಂದ್ಯದ ಹೀರೋ ಕೆಎಲ್ ರಾಹುಲ್ 9 ರನ್ ಸಿಡಿಸಿ ಔಟಾದರು. ಹಾರ್ದಿಕ್ ಪಾಂಡ್ಯ 1 ರನ್ ಸಿಡಿಸಿ ನಿರ್ಗಮಿಸಿದರು.

ಹೋರಾಟದ ಸೂಚನೆ ನೀಡಿ ಭಾರತ ತಂಡಕ್ಕ ಆಸರೆಯಾಗಿದ್ದ ವಿರಾಟ್ ಕೊಹ್ಲಿ 31 ರನ್ ಸಿಡಿಸಿ ನಿರ್ಗಮಿಸಿದರು. 71 ರನ್‌ಗಳಿಸುವಷ್ಟರಲ್ಲೇ ಭಾರತ 6 ವಿಕೆಟ್ ಕಳೆದುಕೊಂಡು ಅಲ್ಭ ಮೊತ್ತಕ್ಕೆ ಕುಸಿಯ ಭೀತಿ ಎದುರಿಸಿತು. ರವೀಂದ್ರ ಜಡೇಜಾ ಹಾಗೂ ಅಕ್ಸರ್ ಪಟೇಲ್ ಜೊತೆಯಾಟದಿಂದ ಟೀಂ ಇಂಡಿಯಾ 100 ರನ್ ಗಡಿ ದಾಟಿತು. ಆದರೆ ಜಡೇಜಾ 16 ರನ್ ಸಿಡಿಸಿ ಔಟಾದರು. ಮಿಚೆಲ್ ಸ್ಟಾರ್ಕ್ ಹಾಗೂ ಸೀನ್ ಅಬಾಟ್ ದಾಳಿಗೆ ಟೀಂ ಇಂಡಿಯಾ ಸಂಪೂರ್ಣವಾಗಿ ಕುಸಿತ ಕಂಡಿತು.

ಇತ್ತ ಕುಲ್ದೀಪ್ ಯಾದವ್ ಹಾಗೂ ಮೊಹಮ್ಮದ್ ಶಮಿ ಅಬ್ಬರಿಸಲಿಲ್ಲ. ಅಕ್ಸರ್ ಪಟೇಲ್ ಅಜೇಯ 29 ರನ್ ಸಿಡಿಸಿದರು. ಭಾರತ 26 ಓವರ್‌ಗಳಲ್ಲಿ 117 ರನ್ ಸಿಡಿಸಿ ಆಲೌಟ್ ಆಯಿತು. ಇದೀಗ ಆಸ್ಟ್ರೇಲಿಯಾ ಗೆಲುವಿಗೆ 118 ರನ್ ಸುಲಭ ಟಾರ್ಗೆಟ್ ನೀಡಲಾಗಿದೆ. 

ಮಿಚೆಲ್ ಸ್ಟಾರ್ಕ್ 5 ವಿಕೆಟ್ ಕಬಳಿಸಿದರೆ, ಸೀನ್ ಅಬಾಟ್ 3, ನಥನ್ ಎಲಿಸ್ 2 ವಿಕೆಟ್ ಕಬಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ಸುಲಭ ಟಾರ್ಗೆಟ್ ಪಡೆದಿದೆ. 3 ಪಂದ್ಯಗಳ ಏಕದಿನ ಸರಣಿ ಮೊದಲ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿತ್ತು. ಕೆಎಲ್ ರಾಹುಲ್ ಹೋರಾಟದ ಮೂಲಕ ಭಾರತ 189 ರನ್ ಚೇಸ್ ಮಾಡಿ ಗೆಲುವು ದಾಖಲಿಸಿತ್ತು. ಇದೀಗ ದ್ವಿತೀಯ ಪಂದ್ಯದಲ್ಲಿ ಭಾರತ ಅಲ್ಪ ಮೊತ್ತಕ್ಕೆ ಕುಸಿದಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲುವಿಗಾಗಿ ಭಾರತ ಶಕ್ತಿ ಮೀರಿ ಪ್ರಯತ್ನಿಸಬೇಕಿದೆ. ಇತ್ತ ಆಸ್ಟ್ರೇಲಿಯಾಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿ ಉಳಿಸಿಕೊಳ್ಳಲು ಪ್ರಯತ್ನದಲ್ಲಿದೆ. ಈ ಹೋರಾಟದಲ್ಲಿ ಆಸ್ಟ್ರೇಲಿಯಾ ಮೊದಲ ಹಂತದಲ್ಲಿ ಮೇಲುಗೈ ಸಾಧಿಸಿದೆ.

Leave a Reply

Your email address will not be published. Required fields are marked *