ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ( Department of Public Instruction ) ಶಾಲಾ ಶಿಕ್ಷಣ ಇಲಾಖೆ ಎಂಬುದಾಗಿ ಮರು ಪದನಾಮೀಕರಿಸಿ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಸಾರ್ವಜನಿಕ ಶಿಕ್ಷಣ ಆಯುಕ್ತರು ಹಾಗೂ ಅದರ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ ಕಚೇರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ, ಕ್ಲಸ್ಟರ್ ಶಾಲೆಗಳು ಮತ್ತು ಕಚೇರಿಗಳ ನಾಮಫಲಕಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶಾಲಾ ಶಿಕ್ಷಣ ಇಲಾಖೆ ಎಂದು ಮರು ಪದನಾಮೀಕರಣಗೊಳಿಸುವಂತೆ ಸೂಚಿಸಿದ್ದಾರೆ.
ಅಲ್ಲದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಹುದ್ದೆಯನ್ನು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಎಂಬುದಾಗಿಯೂ ಪದನಾಮೀಕರಿಸಲಾಗಿದೆ. ಅಪರ ಆಯುಕ್ತಾಲಯ, ಕಲಬುರ್ಗಿ ಮತ್ತು ಧಾರವಾಡ, ಇಲಾಖೆಯ ಎಲ್ಲಾ ನಿರ್ದೇಶನಾಲಯಗಳು ಹಾಗೂ ಅವುಗಳ ಅಡಿ ಬರುವ ಎಲ್ಲಾ ಜಿಲ್ಲಾ ಮತ್ತು ತಾಲೂಕು, ಬ್ಲಾಕ್ ಕಚೇರಿಗಳು, ವಿಭಾಗ ಹಂತದ ಕಚೇರಿಗಳು, ಜಿಲ್ಲಾ ಹಂತದ ಉಪ ನಿರ್ದೇಶಕರು (ಆಡಳಿತ) ಹಾಗೂ ಡಯಟ್ ಪ್ರಾಂಶುಪಾಲರ ಕಚೇರಿ, ಬ್ಲಾಕ್ ಹಂತದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ಹಾಗೂ ಕ್ಲಸ್ಟರ್ ಹಂತದ ಕಚೇರಿಗಳಲ್ಲಿ ಶಾಲಾ ಶಿಕ್ಷಣ ಎಂದು ಪದನಾಮೀಕರಿಸುವಂತೆ ಆದೇಶಿಸಿದ್ದಾರೆ.
ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಹುದ್ದೆಯನ್ನು ರಾಜ್ಯ ಯೋಜನಾ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ಎಂದು ಪದನಾಮೀಕರಿಸಲಾಗಿದೆ. ರಾಜ್ಯ ಯೋಜನಾ ನಿರ್ದೇಶಕರ ಕಚೇರಿ ಹಾಗೂ ಅದರಡಿ ಬರುವ ಎಲ್ಲಾ ಕಚೇರಿಗಳಲ್ಲಿ ಶಾಲಾ ಶಿಕ್ಷಣ ಎಂದು ಪದನಾಮೀಕರಿಸಿ ಆದೇಶಿಸಿದ್ದಾರೆ.
ಇದಲ್ಲದೇ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಾಲಾ ಶಿಕ್ಷಣ ಎಂದು ಪದನಾಮೀಕರಿಸಿದೆ. ಶಾಲಾ ಶಿಕ್ಷಣ ಇಲಾಖೆ ಎಂದು ನೂತನವಾಗಿ ಪದನಾಮೀಕರಿಸಿದ ಪದನಾಮವನ್ನು ಸಂಬಂಧಿಸಿದ ಎಲ್ಲಾ ಕಚೇರಿ, ಶಾಲೆಗಳ ಎಲ್ಲಾ ನಾಮಫಲಕಗಳಲ್ಲಿ ಬರೆಸಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.