ಕಾರ್ಕಳ: ಹಿಂದುತ್ವ, ಅಭಿವೃದ್ಧಿ, ಯುವನಾಯಕತ್ವದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ,ಕಾರ್ಕಳವನ್ನು ಎಲ್ಲಾ ಆಯಾಮಗಳಲ್ಲಿ ಅಭಿವೃದ್ಧಿಪಡಿಸುವುದೇ ಸ್ವರ್ಣ ಕಾರ್ಕಳದ ಪರಿಕಲ್ಪನೆಯಾಗಿದೆ ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಏಪ್ರಿಲ್5 ರಂದು ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಕಳೆದ 5 ವರ್ಷಗಳಲ್ಲಿ ಹಾಕಿಕೊಂಡ ಯೋಜನೆಗಳನ್ನು ಹಂತಹಂತವಾಗಿ ಸಾಧಿಸಿದ ತೃಪ್ತಿ ನಮಗಿದೆ. ಕಾರ್ಕಳದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಐಟಿಐ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು,ನರ್ಸಿಂಗ್ ಕಾಲೇಜು,ಜರ್ಮನ್ ಟೆಕ್ನಾಲಜಿ ತಾಂತ್ರಿಕ ಕಾಲೇಜು ಸ್ಥಾಪನೆ ಮಾಡಲಾಗಿದೆ.ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ 236 ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗಿದೆ.ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ, ಕೋಟಿ ಚೆನ್ನಯ್ಯ ಥೀಮ್ ಪಾರ್ಕ್, ಹರಿಯಪ್ಪನ ಕೆರೆ,ಮಠದಕೆರೆ ಅಭಿವೃದ್ಧಿ ಹೀಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.
ಕಾರ್ಕಳ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ವಿದ್ಯುತ್ ಸಬ್ ಸ್ಟೇಷನ್ ಗಳ ನಿರ್ಮಾಣ,ಕ್ಷೇತ್ರದ ಜನರು ವಿದ್ಯುತ್ ಸಂಬಂಧಿತ ಕೆಲಸಗಳಿಗೆ ಉಡುಪಿಗೆ ಅಲೆದಾಡುವುದನ್ನು ತಪ್ಪಿಸಲು ಕಾರ್ಕಳದಲ್ಲಿ ಮೆಸ್ಕಾಂ ವಿಭಾಗೀಯ ಕಚೇರಿ ಆರಂಭಿಸಲಾಗಿದೆ.
ಅಭಿವೃದ್ಧಿಯ ಜತೆಗೆ ಹಿಂದುತ್ವಕ್ಕೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಮತಾಂತರ ನಿಷೇಧ, ಹಿಜಾಬ್ ನಿಷೇಧ, ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಸರ್ಕಾರ ಹಿಂದುತ್ವದ ಪರವಾಗಿದೆ ಎಂದು ಸಾಬೀತಾಗಿದೆ.
ವಿಧಾನಸಭೆ ಚುನಾವಣೆ ಸ್ಥಳೀಯ ಭಿನ್ನಮತದ ಸಮಸ್ಯೆ ಪರಿಹಾರಕ್ಕೆ ಅಲ್ಲ, ನರೇಂದ್ರ ಮೋದಿಯವರ ಕೈ ಬಲಪಡಿಸುವ ಮೂಲಕ ದೇಶದ ಭದ್ರತೆ ,ಅಭಿವೃದ್ಧಿಗಾಗಿ ನಡೆಯುವ ಚುನಾವಣೆ ಇದಾಗಿದೆ. ಕಾರ್ಕಳದ ಚುನಾವಣೆ ಅಭಿವೃದ್ಧಿಪರ ಹಾಗೂ ಅಭಿವೃದ್ಧಿ ವಿರೋಧಿಗಳ ನಡುವಿನ ಚುನಾವಣೆಯಾಗಿದೆ ಎಂದರು.
ಅಭಿವೃದ್ಧಿಯನ್ನು ಸಹಿಸದ ಮಾನಸಿಕ ಭ್ರಷ್ಟಾಚಾರಿಗಳ, ಹೊಟ್ಟೆಕಿಚ್ಚಿನ,ಜಾತಿ ವ್ಯಾಮೋಹದ ಭ್ರಷ್ಟಾಚಾರಿಗಳಿಂದ ಮತದಾರರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗಿದೆ. ಕಾರ್ಯಕರ್ತರ ಸಹಕಾರದಿಂದ ಕಳೆದ2 ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಅಭಿವೃದ್ಧಿ ಎನ್ನುವುದು ಯಾವುದೇ ಜಾತಿಗೆ ಸೀಮಿತವಾಗಿಲ್ಲ, ಜಾತಿ ರಾಜಕಾರಣ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಯಲು ಸಾಧ್ಯವಿಲ್ಲ.ಸಮಾಜದ ಎಲ್ಲಾ ವರ್ಗದ ಜನರ ಹಿತಕಾಯುವುದು ನಮ್ಮ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಮಾತನಾಡಿ, ರಾಜಕೀಯದಲ್ಲಿ ಅಪಪ್ರಚಾರ,ಜಾತಿ ರಾಜಕೀಯದ ಮೂಲಕ ಮತವಿಭಜನೆ ಮಾಡುವ ಹುನ್ನಾರ ನಡೆಯುತ್ತಿದೆ, ಆದರೆ ಜಾತಿ ನೋಡಿ ಓಟು ಹಾಕಬೇಡಿ,ಕ್ಷೇತ್ರದ ಅಭಿವೃದ್ಧಿ ಗಮನಿಸಿ ಓಟು ಹಾಕಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಹಿರಿಯ ನ್ಯಾಯವಾದಿ ಎಂ.ಕೆ ವಿಜಯಕುಮಾರ್ ಮಾತನಾಡಿ,ಸುನಿಲ್ ಕುಮಾರ್ ದೇಹದಲ್ಲಿ ಕೋಟಿ ಚೆನ್ನಯ್ಯ ರಕ್ತ ಹರಿಯುತ್ತಿದೆ, ಹಿಂದುತ್ವದ ಪ್ರತೀಕವಾದ ಪರಶುರಾಮ ಥೀಮ್ ಪಾರ್ಕ್ ಮಾಡಿರುವುದು ಹಿಂದುತ್ವದ ರಕ್ಷಣೆಯಲ್ಲವೇ,ಕಾರ್ಕಳದ ಐತಿಹಾಸಿಕ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರದ ಪುಣ್ಯಕಾರ್ಯ ಮಾಡಿರುವುದು ಹಿಂದುತ್ವದ ರಕ್ಷಣೆಯಲ್ಲವೇ ಎಂದು ಪ್ರಶ್ನಿಸಿದರು.ಆದರೆ ಕೆಲವು ವಿರೋಧಿಗಳು ಸುನಿಲ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು ಇದಕ್ಕೆ ಮತದಾರರು ಕಿವಿಗೊಡದೇ ಬಿಜೆಪಿಯನ್ನು ಬೆಂಬಲಿಸಬೇಕೆಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್,ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ್ ಕಾಮತ್, ಎಂ.ಕೆ ವಿಜಯಕುಮಾರ್,ಬಿಜೆಪಿ ಚುನಾವಣಾ ಉಸ್ತುವಾರಿ ಬಾಹುಬಲಿ ಪ್ರಸಾದ್,
ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಹೇಶ್ ಶೆಟ್ಟಿ ಕುಡುಪುಲಾಜೆ ಅವರನ್ನು ಆಯ್ಕೆ ಮಾಡಲಾಯಿತು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಸ್ವಾಗತಿಸಿ,ಪ್ರಕಾಶ್ ರಾವ್ ವಂದಿಸಿದರು. ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು