Share this news

ಬೆಂಗಳೂರು: ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಕನ್ನಡ ಭಾಷೆಯಲ್ಲಿ ಸುಪ್ರೀಂಕೋರ್ಟ್, ಹೈಕೋರ್ಟ್‌ ತೀರ್ಪುಗಳು ಸಿಗಬೇಕೆಂಬ ಬಹುದಿನಗಳ ಬೇಡಿಕೆಯನ್ನು ಹೈಕೋರ್ಟ್ ಕೊನೆಗೂ ಈಡೇರಿಸಿದೆ. ಅದರಂತೆ ಕರ್ನಾಟಕ ಹೈಕೋರ್ಟ್‌ ಕನ್ನಡಕ್ಕೆ ಅನುವಾದಿಸಿದ ತೀರ್ಪುಗಳ ವೆಬ್‌ ಸೈಟ್ ಅನ್ನು ಪ್ರಾರಂಭಿಸಿದೆ. ಏಪ್ರಿಲ್ 18 ರಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಈ ವೆಬ್ ಪುಟವನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ ನ ಆಯ್ದ ತೀರ್ಪುಗಳು ಜನಸಾಮಾನ್ಯರಿಗೆ ಮತ್ತು ದಾವೆದಾರರಿಗೆ ಅನುಕೂಲವಾಗುವಂತೆ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರ ನೇತೃತ್ವದಲ್ಲಿ ‘ಕೃತಕ ಬುದ್ಧಿಮತ್ತೆಯ ಕಾನೂನು ಅನುವಾದ ಸಲಹಾ ಸಮಿತಿ (Artificial Intelligence Assisted Legal Translation Advisory Committee) ಹೆಸರಿನ ಕೇಂದ್ರ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ರಾಜ್ಯ ಹೈಕೋರ್ಟ್‌ ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಸಹ ಸದಸ್ಯರಾಗಿದ್ದಾರೆ. ‘ಸುವಾಸ್ʼ ಕೃತಕ ಬುದ್ದಿಮತ್ತೆ ಟೂಲ್ ಬಳಕೆ ಮಾಡಿ ನ್ಯಾಯಾಂಗ ದಾಖಲೆಗಳು ಮತ್ತು ತೀರ್ಪುಗಳನ್ನು ಕನ್ನಡೀಕರಿಸಲಾಗುತ್ತಿದೆ.

ರಾಜ್ಯಮಟ್ಟದಲ್ಲಿ ಕರ್ನಾಟಕ ಹೈಕೋರ್ಟ್‌ ಕೂಡ ಇದೇ ರೀತಿಯ ಸಮಿತಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ನೇತೃತ್ವದಲ್ಲಿ ರಚಿಸಿದೆ. ಇದೀಗ ಹೈಕೋರ್ಟ್‌ ಆಂತರಿಕ ಅನುವಾದಕರ ಸಹಾಯದಿಂದ ಭಾಷಾಂತರ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಪ್ರಾರಂಭಿಕವಾಗಿ ಸುಪ್ರೀಂ ಕೋರ್ಟ್‌ ನ 28 ತೀರ್ಪುಗಳು ಹಾಗೂ ಹೈಕೋರ್ಟ್ ನ 169 ಭಾಷಾಂತರಿಸಿದ ತೀರ್ಪುಗಳನ್ನು ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ (ಕಂಪ್ಯೂಟರ್) ಎನ್ ಜಿ ದಿನೇಶ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *