ಕಾರ್ಕಳ: 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಟಿಕೆಟ್ ಸಿಗದಿದ್ದಾಗ ಅಂದು ಗೋಪಾಲ ಭಂಡಾರಿ ಬದುಕಿದ್ದಾಗಲೇ ಸಾರ್ವಜನಿಕವಾಗಿ ಅವರ ಶವಯಾತ್ರೆ ನಡೆಸಿದ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿಗೆ ಈಗ ನಾಲ್ಕು ವರ್ಷದ ಬಳಿಕ ಭಂಡಾರಿಯವರ ನೆನಪಾಗಿದೆ, ಪುತ್ಥಳಿ ನಿರ್ಮಿಸುವುದಕ್ಕೆ ಜ್ಞಾನೋದಯವಾಗಿದೆ, ತಾವು ಮೊದಲು ತಮ್ಮ ಬದ್ಧತೆ ಏನೆಂಬುದನ್ನು ಸ್ಪಷ್ಟಪಡಿಸಿ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಸವಾಲು ಹಾಕಿದ್ದಾರೆ.
ಅವರು ಶನಿವಾರ ಹೆಬ್ರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಟಿಕೆಟ್ ಸಿಗದಿದ್ದಾಗ ಜೀವಂತವಿದ್ದ ವ್ಯಕ್ತಿಯನ್ನೇ ಶವಯಾತ್ರೆ ನಡೆಸಿ ಸುಟ್ಟರು, ಊರೆಲ್ಲಾ ಸಂಭ್ರಮಿಸಿದ್ದರು. ಅಂದು ಕಣ್ಣೀರು ಹಾಕುವಂತೆ ಮಾಡಿ ಮಾನವೀಯತೆ ಮರೆತು ಅಮಾನವೀಯವಾಗಿ ನಡೆಸಿಕೊಂಡವರು, ಇಂದು ಅವರ ಹೆಸರಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅಂದು ಗೌರವ ಕೊಡದವರು ಇಂದು ಪ್ರತಿಮೆ ನಿರ್ಮಾಣದ ಮಾಡುವ ಪೊಳ್ಳು ಭರವಸೆ ನೀಡಿ ನಾಟಕವಾಡುತ್ತಿದ್ದಾರೆ ಎಂದು ಕುಟುಕಿದರು.
ಅಂದಿನ ಆ ಘೋರ ಕ ಘಟನೆ ಶವಯಾತ್ರೆ ನಡೆಸಿದ್ದನ್ನು ನೀವು ಮರೆತರೂ ಕ್ಷೇತ್ರದ ಜನತೆ ಮರೆತಿಲ್ಲ,ಅಂದು ಟಿಕೆಟ್ ಸಿಗದಿದ್ದಾಗ ಕೀಳು ಮಟ್ಟಕ್ಕೆ ಇಳಿದ ನೀವು ನಾಲ್ಕು ವರ್ಷ ಬಿಜೆಪಿ ಜೊತೆ ಗೆಳೆತನ ಬೆಳೆಸಿಕೊಂಡಿದ್ದಿರಿ, ತಾವೊಬ್ಬ ಅವಕಾಶವಾದಿ ರಾಜಕಾರಣಿಯಾಗಲು ಬಯಸುತ್ತಿದ್ದೀರಿ, ಟಿಕೆಟ್ ಸಿಕ್ಕಾಗ ಒಂದು ಪಕ್ಷ ಒಂದು ನೀತಿ ಸಿಗದೇ ಇದ್ದಾಗ ಇನ್ನೊಂದು ಕಡೆ ವಾಲುವ ನೀವು ನಿಜವಾಗಿಯೂ ಯಾವುದರಲ್ಲಿ ಇದ್ದೀರಿ?ನಿಮ್ಮ ನಿಜವಾದ ಬದ್ಧತೆ ಏನೆಂಬುದನ್ನು ಮೊದಲು ಸ್ಪಷ್ಟ ಪಡಿಸಿ ಎಂದರು.
ಓರ್ವ ಜನಪ್ರತಿನಿಧಿಗೆ ಹೇಗೆ ಗೌರವ ಕೊಡಬೇಕೆಂಬುದು ಬಿಜೆಪಿಗೆ ತಿಳಿದಿದೆ. ಅದೇ ಕಾರಣದಿಂದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರಿಗೆ ಗೌರವ ನೀಡಿದ್ದೇವೆ ಕಾರ್ಕಳ ಉತ್ಸವ ಸಂದರ್ಭ ಉತ್ಸವದ ಪ್ರಧಾನ ವೇದಿಕೆಗೆ ಭಂಡಾರಿಯವರ ಹೆಸರನ್ನು ಇಟ್ಟು ದೊಡ್ಡ ಮಟ್ಟದ ಗೌರವ ಸಲ್ಲಿಸಿದ್ದೇನೆ. ಇಡೀ ನಾಡು ಅವರಿಗೆ ಸಲ್ಲಿಸಿದ ಗೌರವದ ಬಗ್ಗೆ ಕೊಂಡಾಡಿದೆ. ಅವರಿಗೆ ಸಲ್ಲಬೇಕಾದ ಎಲ್ಲ ಗೌರವವನ್ನು ಬಿಜೆಪಿ ಸಲ್ಲಿಸುತ್ತ ಬಂದಿದೆ. ಮುಂದೆಯೂ ನೀಡುತ್ತದೆ. ಆದರೆ, ಕಾಂಗ್ರೆಸ್ ಅಭ್ಯರ್ಥಿಯಾದ ತಾವು ಚುನಾವಣೆ ಹೊತ್ತಲ್ಲಿ ಇಂತಹ ಅಪ್ರಸ್ತುತ ವಿಚಾರ ಮುಂದಿಟ್ಟುಕೊಂಡು ಜನರ ಮುಂದೆ ಭಾವನಾತ್ಮಕವಾಗಿ, ನಾಟಕೀಯವಾಗಿ ವರ್ತಿಸುತ್ತಿದ್ದೀರಿ ಎಂದು ಆರೋಪಿಸಿದರು.
ಸಭೆಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ,ಸತೀಶ್ ಪೈ,ಮತ್ತಿತರರು ಉಪಸ್ಥಿತರಿದ್ದರು.