ಕಾರ್ಕಳ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರ ಈ ಬಾರಿ ಅತ್ಯಂತ ಜಿದ್ದಾಜಿದ್ದಿ ಕಣವಾಗಿ ಮಾರ್ಪಟ್ಟಿದೆ. ಇನ್ನೇನು ಚುನಾವಣೆಗೆ ಕೇವಲ 15 ದಿನಗಳು ಉಳಿದಿದ್ದು, ಈ ಮತಸಮರದಲ್ಲಿ ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಸೇರಿ 9 ಜನ ಅಭ್ಯರ್ಥಿಗಳು ತಮ್ಮ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.
ಕಾರ್ಕಳ ವಿಧಾಸಭಾ ಕ್ಷೇತ್ರದಿಂದ 11 ನಾಮಪತ್ರಗಳು ಕ್ರಮಬದ್ಧವಾಗಿತ್ತು ಈ ಪೈಕಿ ಸೋಮವಾರ 2 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದ ಕಾರಣದಿಂದ ಅಂತಿಮವಾಗಿ 9 ಜನ ಸ್ಪರ್ಧಾಕಣದಲ್ಲಿ ಉಳಿದಿದ್ದಾರೆ.
ಕಳೆದ ಒಂದು ದಶಕದಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಕಾರ್ಕಳದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹಿಂದುತ್ವದ ಫೈರ್ ಬ್ರಾಂಡ್ ಎನ್ನುವ ಖ್ಯಾತಿಯ ಮುತಾಲಿಕ್ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆ ಏರ್ಪಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.ಸುನಿಲ್ ಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ್ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾರಣದಿಂದ ಬಿಜೆಪಿಗೆ ಕ್ಷೇತ್ರದಲ್ಲಿ ಹಿನ್ನಡೆಯಾಗಬಹುದೆನ್ನುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಈ ಬಾರಿ ಬಿಜೆಪಿಯ ಭದ್ರಕೋಟೆಯನ್ನು ಪುಡಿಗಟ್ಟಲು ಪ್ರಬಲಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಅವರನ್ನೇ ಕಣಕ್ಕಿಳಿಸಿದೆ.ಆದರೆ ಎರಡೂ ಪಕ್ಷಗಳಿಗೆ ಮುತಾಲಿಕ್ ಸ್ಪರ್ಧೆ ಕಗ್ಗಂಟಾಗಿ ಪರಿಣಮಿಸಿದೆ
ಹಾಲಿ ಶಾಸಕ ಹಾಗೂ ಸಚಿವ ಸುನಿಲ್ ಕುಮಾರ್ ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದರೆ, ಇತ್ತ ಸುನಿಲ್ ಕುಮಾರ್ ಅವರಿಗೆ ಟಕ್ಕರ್ ನೀಡಲು ಕಾರ್ಕಳ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸುನಿಲ್ ಕುಮಾರ್ ವಿರುದ್ಧ ಹಿಂದೂ ಸಂಘಟನೆಯ ಕಾರ್ಯಕರ್ತರ ತಂಡ ಕಟ್ಟಿಕೊಂಡು ಅವರು ತಮ್ಮ ಪ್ರಚಾರ ಸಭೆಗಳಲ್ಲಿ ಬೇನಾಮಿ ಆಸ್ತಿ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಮಾಡುವ ಮೂಲಕ ಬಿಜೆಪಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದಾರೆ.ಇದರ ಜತೆಗೆ ಬಿಜೆಪಿ ಕಾರ್ಯಕರ್ತರಲ್ಲಿಯೂ ಸ್ವಲ್ಪಮಟ್ಟಿನ ಅಸಮಾಧಾನ ಹೊಗೆಯಾಡುತ್ತಿದ್ದು ಬಿಜೆಪಿ ಪಕ್ಷ ಸಂಘಟನೆಯ ಶಕ್ತಿಯಿಂದ ಸುನಿಲ್ ಕುಮಾರ್ ಭಿನ್ನಮತವನ್ನು ಮೆಟ್ಟಿನಿಲ್ಲುವ ವಿಶ್ವಾಸ್ದಲ್ಲಿದ್ದಾರೆ.
ಇತ್ತ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿವರನ್ನು ಕೈ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದವರು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದ್ದರು. ಕೊನೆಕ್ಷಣದಲ್ಲಿ ಟಿಕೆಟ್ ವಂಚಿತ ಮಂಜುನಾಥ ಪೂಜಾರಿ ಅಸಮಾಧಾನಗೊಂಡು ಉದಯ ಶೆಟ್ಟಿಯವರಿಗೆ ಟಿಕೆಟ್ ನೀಡಿದ್ದಕ್ಕಾಗಿ ಪಕ್ಷದದ ವಿರುದ್ಧವೇ ತಿರುಗಿಬಿದಿದ್ದರು.ಇದೆಲ್ಲವನ್ನು ಬದಿಗೊತ್ತಿ ಉದಯ ಶೆಟ್ಟಿ ಕಾರ್ಕಳ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ನಡೆಸುತ್ತಿದ್ದು ಈ ಬಾರಿ ಕಾರ್ಕಳದಲ್ಲಿ ನಮ್ಮದೇ ಗೆಲುವು ಎನ್ನುತ್ತಿದ್ದಾರೆ. ಆದರೆ ಪ್ರಮೋದ್ ಮುತಾಲಿಕ್ ಸ್ಪರ್ಧೆಯಿಂದ ಕಾಂಗ್ರೆಸ್ ಹಾಗೂ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿರುವುದು ಸುಳ್ಳಲ್ಲ.
ಬಿಜೆಪಿ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿಯ ಹೋರಾಟದ ಜತೆಗೆ ಮುತಾಲಿಕ್ ಚುನಾವಣಾ ಪ್ರಚಾರವೂ ಬಿರುಸಾಗಿದ್ದು, ಜೆಡಿಎಸ್ ನಿಂದ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ಹೆಬ್ರಿಯ ಕುಚ್ಚೂರು ಶ್ರೀಕಾಂತ್ ಪೂಜಾರಿ ಕಣದಲ್ಲಿದ್ದು ಮತದಾರರ ಒಲವು ಜೆಡಿಎಸ್ ಪರವಾಗಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಇನ್ನುಳಿದಂತೆ ಆಮ್ ಆದ್ಮಿ ಪಕ್ಷದಿಂದ ಕಾರ್ಕಳದ ಮಿಯ್ಯಾರಿನ ಡೇನಿಯಲ್ ಫೆಡ್ರಿಕ್ ರೇಂಜರ್, ಉತ್ತಮ ಪ್ರಜಾಕೀಯ ಪಕ್ಷದಿಂದ ಕುಂದಾಪುರದ ಬಾರ್ಕೂರಿನ ಅರುಣ್ ದೀಪಕ್ ಮೆಂಡೋನ್ಸಾ ಕಣದಲ್ಲಿದ್ದರೆ, ಪಕ್ಷೇತರರಾಗಿ ಮುತಾಲಿಕ್ ಸೇರಿದಂತೆ ಬಿಜೆಪಿಯಿಂದ ಟಿಕೆಟ್ ಬಯಸಿದ್ದ ಕಾರ್ಕಳ ಮೂಲದ ಬೆಂಗಳೂರಿನ ನಾಗಸಂದ್ರದ ಡಾ.ಮಮತಾ ಹೆಗ್ಡೆ,ಕಾರ್ಕಳ ನಂದಳಿಕೆಯ ವಿದ್ಯಾಲಕ್ಷ್ಮೀ , ಹಾಗೂ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಸುಧಾಕರ ಆಚಾರ್ಯ ಕಣದಲ್ಲಿದ್ದು ಒಂದಷ್ಟು ಮತಗಳಿಕೆಯ ಲೆಕ್ಕಾಚಾರದಲ್ಲಿದ್ದಾರೆ.
ಒಟ್ಟಿನಲ್ಲಿ ಕಾರ್ಕಳ ಚುನಾವಣಾ ಅಖಾಡ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗುವ ಎಲ್ಲಾ ಲಕ್ಷ÷ಣಗಳು ದಟ್ಟವಾಗಿದ್ದು, ಯಾವ ಪಕ್ಷ÷ದ ಅಭ್ಯರ್ಥಿ ಗೆದ್ದರೂ ಗೆಲುವಿನ ಅಂತರ ತೀರಾ ಕಡಿಮೆಯಾಗಬಹುದೆನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ.