Share this news

ಕಾರ್ಕಳ: ಕಾರ್ಕಳ ಕ್ಷೇತ್ರದ ಕಾಂಗ್ರೆಸ್ಸಿಗೆ ಕಾರ್ಯಕರ್ತರ ಅಭಾವ ತಲೆದೋರಿದೆ. ಮುಜುಗರದಿಂದ ಪಾರಾಗಲು ಕಾಂಗ್ರೆಸ್ ಕಾರ್ಯಕರ್ತರನ್ನೆ ಮರಳಿ ಕರೆತಂದು ಪಕ್ಷದ ಧ್ವಜ ನೀಡಿ ಪಕ್ಷ ಸೇರ್ಪಡೆಗೊಳಿಸುವ ನಾಟಕವಾಡಿ ಅಬ್ಬರದ ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಲೇವಡಿ ಮಾಡಿದ್ದಾರೆ.

ಕಳೆದ 4 ವರ್ಷ ಕಾರ್ಕಳದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್ ಕಾಣೆಯಾಗಿ ಹುಡುಕುವ ಪರಿಸ್ಥಿತಿ ಇದೆ. ಈಗ ಚುನಾವಣೆ ಬಂದಾಗ ನಾವು ಇದ್ದೇವೆ ಎಂದು ತೋರಿಸಿಕೊಳ್ಳಲು ಪಕ್ಷದ ನಾಯಕರು ಹೆಣಗಾಡುತ್ತಿದ್ದಾರೆ. ಪಕ್ಷದಲ್ಲಿ ಅಳಿದುಳಿದವರನ್ನು, ತಟಸ್ಥರಾಗಿದ್ದವರನ್ನು ಹುಡುಕಿಕೊಂಡು ಹೋಗಿ ಕರೆ ತಂದು ವೇದಿಕೆ ಹತ್ತಿಸಿ, ಪಕ್ಷದ ಧ್ವಜ ನೀಡಿ ಸೇರ್ಪಡೆಯ ನಾಟಕ ಆಡುತ್ತಿದೆ ಎಂದು ದೂರಿದರು.

ಕಾಂಗ್ರೆಸ್ಸಿಗೆ ಕಾರ್ಯಕರ್ತರೆ ಸಿಗುತಿಲ್ಲ. ಅದಕ್ಕಾಗಿ ಅವರದೇ ಪಕ್ಷದ ಕಾರ್ಯಕರ್ತರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸಿ ಅಬ್ಬರದ ಪ್ರಚಾರಕ್ಕೆ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ದಯನೀಯ ಸ್ಥಿತಿ ಬಂದಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಹಣ, ಅಮಿಷ ಒಡ್ಡುವ ಮೂಲಕವು ಪಕ್ಷ ಸೇರ್ಪಡೆ ಎಂಬ ಅಬ್ಬರದ ಪ್ರಚಾರದ ಮೂಲಕ ಜನರನ್ನು ಮರುಳು ಮಾಡುವ ಆ ಪಕ್ಷದ ನಾಯಕರ ಪ್ರಯತ್ನ ಫಲಿಸದು.

ಬಿಜೆಪಿ ಕಾರ್ಯಕರ್ತರು ಪಕ್ಷ ನಿಷ್ಠೆಗೆ ಬದ್ಧರಾಗಿದ್ದು, ಅಪ್ಪಿ ತಪ್ಪಿಯೂ ಕಾಂಗ್ರೆಸ್ ಸೇರುವುದಾಗಲಿ ಅತ್ತ ಕಡೆ ಮುಖ ಮಾಡುವುದಿಲ್ಲ. ಆ ವಿಶ್ವಾಸ ನಮಗಿದೆ. ಆದರೆ ಬಿಜೆಪಿ ಪಕ್ಷದ ಕಾರ್ಯಕರ್ತರ ಸೇರ್ಪಡೆ ಎಂದು ದಾರಿ ತಪ್ಪಿಸುವ ಕುತಂತ್ರ ರಾಜಕೀಯದ ಭಾಗವಾಗಿ ಪಕ್ಷ ಸೇರ್ಪಡೆ ನಾಟಕವಾಡುತ್ತಿರುವ ಪಕ್ಷದ ಹೀನಾಯ ಸ್ಥಿತಿ ಬಗ್ಗೆ ಕ್ಷೇತ್ರದ ಜನತೆ ತಿಳಿದುಕೊಂಡಿದ್ದಾರೆ. ಕಾಂಗ್ರೆಸನ್ನೆ ನಂಬದ ಈ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂಬುದನ್ನು ಯಾರೂ ನಂಬಲಾರರು.

ಅಪಪ್ರಚಾರ, ಸುಳ್ಳು ನಾಟಕಗಳಿಂದ ವಾಸ್ತವ ಮರೆಮಾಚಿ ಕುತಂತ್ರ ರಾಜಕಾರಣದಿಂದ ಗೆಲ್ಲಬಹುದು ಎನ್ನುವ ನಂಬಿಕೆ ಕಾಂಗ್ರೆಸ್‌ಗೆ ಬೇಡ. ಈ ಭ್ರಮೆಯಿಂದ ಪಕ್ಷದ ನಾಯಕರು ಇನ್ನಾದರೂ ಹೊರ ಬರಲಿ. ಈ ತನಕ ಅಪಪ್ರಚಾರ ನಡೆಸಿದ್ದು ಸಾಕು. ಈಗ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ ಎನ್ನುವ ಅಪಪ್ರಚಾರ ಆ ಪಕ್ಷದ ಸುಳ್ಳಿನ ಇನ್ನೊಂದು ಮುಖ ಎಂದು ಲೇವಡಿ ಮಾಡಿದ್ದಾರೆ.

Leave a Reply

Your email address will not be published. Required fields are marked *