ಕಾರ್ಕಳ : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಜರಂಗದಳವನ್ನು ನಿಷೇಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವುದನ್ನು ಖಂಡಿಸಿ ಕಾರ್ಕಳ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈಗಾಗಲೇ ರಾಜ್ಯ ಬಿಜೆಪಿ ಸರಕಾರ ಪಿ ಎಫ್ ಐ ಭಯೋತ್ಪಾದಕ ಸಂಘಟನೆಯನ್ನು ನಿಷೇಧಿಸಿ, ಅವರ ಕಾನೂನುಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕುವ ಕೆಲಸ ಮಾಡಿದೆ.ಆದರೂ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪಿಎಫ್ ಐ ಅನ್ನು ನಿಷೇಧಿಸುವುದಾಗಿ ಹೇಳಿರುವುದು ಹಾಸ್ಯಾಸ್ಪದವಾಗಿದೆ.
ಪಿ ಎಫ್ ಐ ಜೊತೆಗೆ ಬಜರಂಗದಳವನ್ನು ಕೂಡ ನಿಷೇಧಿಸುವುದಾಗಿ ತಿಳಿಸಿರುವ ಕಾಂಗ್ರೆಸ್ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ತನ್ನ ಅಧಿಕಾರವಧಿಯಲ್ಲಿ ಪಿಎಫ್ ಐ ಜೊತೆಗೆ ಸ್ನೇಹ ಬಾಂಧವ್ಯವನ್ನು ಹೊಂದಿದ್ದು, ಅದರ ನೂರಾರು ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆಗೊಳಿಸಿ, ಪರೋಕ್ಷವಾಗಿ ಹಿಂದು ಸಂಘಟನೆಗಳ ಕಾರ್ಯಕರ್ತರ ಹತ್ಯೆಗೆ ಕಾರಣವಾಗಿತ್ತು. ಇದೀಗ ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿರುವ ಕಾಂಗ್ರೆಸ್ ತನ್ನ ಹಿಂದೂ ದ್ವೇಷ ಪೂರಿತ ನಿಲುವಿನಿಂದ ಭಜರಂಗದಳದ ಮೇಲೆ ಸೇಡು ತೀರಿಸಲು ಹೊರಟಂತಿದೆ.
ಭಜರಂಗದಳವು ಹಿಂದು ಸಮಾಜದ ಹಿತರಕ್ಷಣೆಗಾಗಿ, ಮಾನವೀಯ ನೆಲೆಯಲ್ಲಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವ ದೇಶಪ್ರೇಮಿ ಸಂಘಟನೆಯಾಗಿದೆ. ಗೋಹತ್ಯೆ ,ಮತಾಂತರ, ಲವ್ ಜಿಹಾದ್ ವಿರುದ್ಧ ಸಿಡಿದೆದ್ದು, ಧರ್ಮ ವಿರೋಧಿ ಕೃತ್ಯವನ್ನು ನಡೆಸುವವರಿಗೆ ಸಿಂಹ ಸ್ವಪ್ನವಾಗಿರುವ ಯುವಕರ ಸಂಘಟನೆಯಾಗಿದ್ದು, ಕೋವಿಡ್ ಸಂಕಷ್ಟದ ಸಮಯದಲ್ಲಿ ಪ್ರಾಣಪಾಯವನ್ನು ಲೆಕ್ಕಿಸದೆ ಶವ ಸಂಸ್ಕಾರ,ಆಂಬುಲೆನ್ಸ್ ಸೇವೆ, ಕೋವಿಡ್ ಪೀಡಿತ ಕುಟುಂಬಗಳಿಗೆ ಸಹಾಯ ಹಸ್ತ ನೀಡಿದ ಮಾದರಿ ಸಂಘಟನೆಯಾಗಿದೆ. ಚುನಾವಣೆಯಲ್ಲಿ ಮತಗಳಿಕೆಗಾಗಿ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಹಾಗೂ ವಕ್ತಾರ ಸಾಣೂರು ನರಸಿಂಹ ಕಾಮತ್ ಎಚ್ಚರಿಸಿದ್ದಾರೆ