Share this news

ಕಾರ್ಕಳ: ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದ ಮಿಯ್ಯಾರು ಗ್ರಾಮದ ಕುಂಟಿಬೈಲು ಎಂಬಲ್ಲಿನ ಮತಗಟ್ಟೆ 155ರಲ್ಲಿ ಅಪ್ರಾಪ್ತ ಬಾಲಕ ನಕಲಿ ಮತದಾನ ಮಾಡಿದ್ದಾನೆ ಎನ್ನುವ ಪ್ರಕರಣದ ಕುರಿತು ಇದು ಬಿಜೆಪಿಯ ಕುಮ್ಮಕ್ಕಿನಿಂದ ನಡೆದಿದೆ ಎಂದು ಮಿಯ್ಯಾರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಕಾಂಗ್ರೆಸ್ ಮುಖಂಡರಾದ ತಾರನಾಥ ಕೋಟ್ಯಾನ್ ಹಾಗೂ ಶಬ್ಬೀರ್ ಅಹಮ್ಮದ್ ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ, ನಕಲಿ ಮತದಾನ ನಡೆದಿದೆ ಎಂದು ದಾಖಲೆ ಸಹಿತ ಮತಗಟ್ಟೆ ಅಧಿಕಾರಿಗೆ ದೂರು ನೀಡಿದರೂ ಆತನ ವಿರುದ್ಧ ಕ್ರಮಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದಾರೆ, ಆದ್ದರಿಂದ ಚುನಾವಣಾಧಿಕಾರಿಗಳು ಈ ಮತದಾನ ಪ್ರಕ್ರಿಯೆಯನ್ನು ರದ್ದುಪಡಿಸಿ ಮರುಮತದಾನ ನಡೆಸಬೇಕೆಂದು ಆಗ್ರಹಿಸಿದ್ದಾರೆ.

sಸುಹಾಸ್ ಶೆಟ್ಟಿ ಎಂಬವರ ಮತವನ್ನು ಧೀರಜ್ ಪೂಜಾರಿ ಎಂಬ ಅಪ್ರಾಪ್ರ ಬಾಲಕ ಚಲಾಯಿಸಿದ್ದು, ಇದು ಕಾನೂನು ಪ್ರಕಾರ ಅಪರಾಧವಾಗುತ್ತದೆ.ಆದರೆ ಬಾಲಕನ ಕುರಿತು ಅನುಮಾನಗೊಂಡ ಪಕ್ಷದ ಏಜೆಂಟ್ ಮತದಾನ ಮಾಡದಂತೆ ಆಕ್ಷೇಪಿಸಿದರೂ ಆತನ ಮುಖಚಹರೆ ಗುರುತಿನಚೀಟಿಗೆ ಹೋಲಿಕೆಯಾಗುತ್ತದೆ ಎನ್ನುವ ಕಾರಣ ನೀಡಿ ಮತದಾನಕ್ಕೆ ಅವಕಾಶ ನೀಡಿದ್ದರು ಎಂದು ಆರೋಪಿಸಿದ್ದಾರೆ. ಆತ ಮತದಾನ ಮಾಡಿ ಮತಗಟ್ಟೆಯಿಂದ ಹೊರಬರುತ್ತಿದ್ದಂತೆಯೇ ಅನುಮಾನಗೊಂಡ ಪೋಲಿಂಗ್ ಏಜೆಂಟ್ ಬಾಲಕನನ್ನು ಪ್ರಶ್ನಿಸಿದಾಗ ಆತ ಸುಹಾಸ್ ಶೆಟ್ಟಿಯವರ ಆಧಾರ್ ಕಾರ್ಡ್ ಬಳಸಿ ಮತದಾನ ನಡೆಸಿರುವುದು ಗೊತ್ತಾಗಿದೆ.ಬಿಜೆಪಿ ಪಕ್ಷದ ಈ ಅಕ್ರಮಕ್ಕೆ ಮತಗಟ್ಟೆ ಅಧಿಕಾರಿ ಸಾಥ್ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಕ್ರಮ ಮತದಾನ ಮಾಡಿದ ಬಾಲಕನ ಹಾಗೂ ಆತನಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆಯ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆಯ ಕುರಿತು ತನಿಖೆ ನಡೆಸಬೇಕಿದ್ದ ಪೊಲೀಸರು ನಮ್ಮ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ, ಬಳಿಕ ಕಾರ್ಯಕರ್ತರ ವಿರೋಧದ ನಡುವೆಯೂ ಈ ಘಟನೆಯ ಕುರಿತು ಸ್ಪಷ್ಟನೆ ನೀಡದೇ ಮತಯಂತ್ರಗಳೊAದಿಗೆ ಅಧಿಕಾರಿಗಳು ತೆರಳಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಸೋಲಿನ ಭಯದಲ್ಲಿ ಕಾರ್ಕಳ ತಾಲೂಕಿನಾದ್ಯಂತ ಅಕ್ರಮ ಮತದಾನ ನಡೆಸಿರುವ ಅನುಮಾನ ವ್ಯಕ್ತವಾಗಿದ್ದು,ಈ ಕುರಿತು ಚುನಾವಣಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು ಹಾಗೂ ಮತಗಟ್ಟೆ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸಿ ಮರುಮತದಾನ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *