ಬೆಂಗಳೂರು: ನಿನ್ನೆ ರಾತ್ರಿ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್ಪ್ರೆಸ್ಗೆ ಸೇರಿದ ಸುಮಾರು 10 ರಿಂದ 12 ಬೋಗಿಗಳು ಬಾಲಸೋರ್ ಬಳಿ ಪಲ್ಟಿಯಾಗಿ ಪಕ್ಕದ ರೈಲ್ವೆ ಹಳಿಯ ಮೇಲೆ ಬಿದ್ದಿದ್ದವು. ಯಶವಂತಪುರದಿಂದ ಹೌರಾಗೆ ತೆರಳುತ್ತಿದ್ದ ರೈಲು ಪಲ್ಟಿಯಾದ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಅದರ ಮೂರರಿಂದ ನಾಲ್ಕು ಬೋಗಿಗಳು ಹಳಿ ತಪ್ಪಿತ್ತು. ಈ ರೈಲು ಅಪಘಾತದಲ್ಲಿ ಕರ್ನಾಟಕದ ಪ್ರಯಾಣಿಕರು ಸುರಕ್ಷಿತವಾಗಿರುವುದಾಗಿ ರೈಲ್ವೆ ಡಿಐಜಿ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಅವರು, ಕರ್ನಾಟಕದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ದೇವರ ದಯೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ . ಒಡಿಶಾದಲ್ಲಿನ ಮೂರು ರೈಲು ಅಪಘಾತ ಸ್ಥಳಕ್ಕೆ ರಾಜ್ಯದ ಅಧಿಕಾರಿಗಳ ತಂಡ ತೆರಳಿದ್ದಾರೆ. ಒಡಿಶಾಗೆ ತೆರಳಿ ಮಾಹಿತಿಯನ್ನು ರಾಜ್ಯಕ್ಕೆ ನೀಡಿಲಿದ್ದಾರೆ. ಆ ಬಳಿಕ ಸ್ಪಷ್ಟವಾದ ಮಾಹಿತಿ ತಿಳಿದು ಬರಲಿದೆ ಎಂದು ಹೇಳಿದರು.
ಒಡಿಶಾ ರೈಲು ಅಪಘಾತದ ನಂತರ ಬೈಯಪ್ಪನಹಳ್ಳಿಯಿಂದ ತೆರಳಬೇಕಿದ್ದಂತ ಮೂರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂಬುದಾಗಿ ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನೂ ಒಡಿಶಾ ರೈಲು ಅಪಘಾತ ದುರಂತದಲ್ಲಿ ಈವರೆಗೆ 280 ಮಂದಿ ಸಾವನ್ನಪ್ಪಿದ್ದು, 900 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಇತ್ತೀಚಿನ ಮಾಹಿತಿಯಿಂದ ತಿಳಿದು ಬಂದಿದೆ.