ಹೊಸದಿಲ್ಲಿ : ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ಕೊಲೆ ಪ್ರಕರಣವೊಂದರಲ್ಲಿ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. 32 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ವಾರಾಣಸಿಯ ನ್ಯಾಯಾಲಯವು ಜೈಲಿನಲ್ಲಿರುವ ದರೋಡೆಕೋರ ಮುಖ್ತಾರ್ ಅನ್ಸಾರಿ ಅವರನ್ನು ಇಂದು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದೆ. ಅಲ್ಲದೆ 1,00,000 ರೂ. ದಂಡವನ್ನೂ ವಿಧಿಸಲಾಗಿದೆ.
ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿ ವಿರುದ್ಧದ 61 ಕ್ರಿಮಿನಲ್ ಪ್ರಕರಣಗಳಲ್ಲಿ ಇದು ಆರನೇ ಶಿಕ್ಷೆಯಾಗಿದ್ದು, ಇವರ ವಿರುದ್ಧ ರಾಜ್ಯದ ವಿವಿಧೆಡೆ ಇನ್ನೂ 20 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಕಾಂಗ್ರೆಸ್ ಮುಖಂಡರೊಬ್ಬರ ಕೊಲೆಯ ಪ್ರಕರಣದಲ್ಲಿ ಇವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಆಗಸ್ಟ್ 3, 1991 ರಂದು, ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಅಜಯ್ ರಾಯ್ ಅವರ ಸಹೋದರ ಅವಧೇಶ್ ರಾಯ್ ಅವರನ್ನು ವಾರಾಣಸಿಯಲ್ಲಿ ಅಜಯ್ ರಾಯ್ ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು.
ಅಪರಾಧ ಎಸಗಿದಾಗ ಮುಕ್ತಾರ್ ಅನ್ಸಾರಿ ಅವರು ಶಾಸಕರಾಗಿರಲಿಲ್ಲ. ಇನ್ನು, ಈ ತೀರ್ಪಿನ ಪೂರ್ವಭಾವಿಯಾಗಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಏರ್ಪಾಡಾಗಿತ್ತು. ಅಜಯ್ ರಾಯ್ ಅವರು ಎಫ್ಐಆರ್ನಲ್ಲಿ ಮುಖ್ತಾರ್ ಅನ್ಸಾರಿ, ಭೀಮ್ ಸಿಂಗ್, ಮಾಜಿ ಶಾಸಕ ಅಬ್ದುಲ್ ಕಲೀಂ ಮತ್ತು ಇತರ ಇಬ್ಬರನ್ನು ಹೆಸರಿಸಿದ್ದಾರೆ.
ಐದು ಅವಧಿಯ ಶಾಸಕರಾಗಿರುವ ಮುಖ್ತಾರ್ ಅನ್ಸಾರಿಗೆ ಏಪ್ರಿಲ್ನಲ್ಲಿ ಮತ್ತೊಂದು ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇವರ ವಿರುದ್ಧ ಭೂಕಬಳಿಕೆ, ಕೊಲೆ ಮತ್ತು ಸುಲಿಗೆ ಸೇರಿ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.