ಮಂಗಳೂರು: ‘ನೈತಿಕ ಪೊಲೀಸ್ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ’ ಮಾಡುವುದಾಗಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಅವರು ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸ ಘಟಕ ಆರಂಭಿಸುತ್ತೇವೆ. ಆ್ಯಂಟಿ ಕಮ್ಯುನಲ್ ವಿಂಗ್ನಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ. ಕರಾವಳಿ ಭಾಗದಲ್ಲಿ ಒಳ್ಳೆಯ ಜನರು ಇದ್ದಾರೆ ಎಂದು ನಂಬಿದ್ದೇವೆ. ಈ ಭಾಗದಲ್ಲಿ ಭಯದ ವಾತಾವರಣವಿದೆ ಎಂದು ಮಾತಾಡ್ತಿದ್ದಾರೆ. ಕೋಮು ಸೌಹಾರ್ದತೆಯನ್ನು ತರಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಸಮಸ್ಯೆಗಳು ಸವಾಲುಗಳ ಬಗ್ಗೆ ವಿಚಾರಿಸಿದ್ದೇನೆ. ನನಗೆ ಇದು ಹೊಸದಲ್ಲ. ನಾನು ಮೂರನೇ ಭಾರೀ ಗೃಹ ಸಚಿವನಾಗಿದ್ದೇನೆ. ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ಗಿರಿ ತುಂಬಾ ನಡೆಯುತ್ತಿದೆ. ಇದನ್ನು ತಡೆಯದಿದ್ರೆ ಇಲಾಖೆ, ರಾಜ್ಯಕ್ಕೆ ಕೆಟ್ಟ ಹೆಸರು. ಹಾಗಾಗಿ ನೈತಿಕ ಪೊಲೀಸ್ಗಿರಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆಗಸ್ಟ್ 15ರೊಳಗೆ ಕರಾವಳಿ ಭಾಗ ಡ್ರಗ್ಸ್ ಮುಕ್ತ ಪ್ರದೇಶವಾಗಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದರು.
ಕೋಮುದ್ವೇಷಕ್ಕೆ ಹತ್ಯೆಯಾದ ದೀಪಕ್ ರಾವ್, ಫಾಜಿಲ್, ಜಲೀಲ್, ಮಸೂದ್ ಕುಟುಂಬಸ್ಥರಿಗೆ ನಮ್ಮ ಸರ್ಕಾರ ಪರಿಹಾರ ನೀಡಲಿದೆ. ಈ ಸಂಬಂಧ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಇದಕ್ಕೂ ಮುಂಚೆ ಮಂಗಳೂರಿನ ಪಶ್ಚಿಮ ವಲಯದ ಐಜಿಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಜತೆ ಗೃಹಸಚಿವ ಡಾ.ಪರಮೇಶ್ವರ್ ಸಭೆ ನಡೆಸಿದರು. ಸಭೆಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ಡಾ.ಚಂದ್ರಗುಪ್ತ, ಆಯುಕ್ತ ಕುಲದೀಪ್ ಕುಮಾರ್ ಜೈನ್, ದಕ್ಷಿಣ ಕನ್ನಡ SP ಸಿ.ಬಿ.ರಿಷ್ಯಂತ್, ಉತ್ತರ ಕನ್ನಡ SP ವಿಷ್ಣುವರ್ಧನ್, ಉಡುಪಿ SP ಅಕ್ಷಯ್ ಮತ್ತು ಚಿಕ್ಕಮಗಳೂರು SP ಉಮಾಪ್ರಶಾಂತ್ ಹಾಜರಿದ್ದರು



