Share this news

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶಾಸಕ ವಿ ಸುನಿಲ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ನಿಮ್ಮನ್ನು ಎರಡನೇ ಬಾರಿಗೆ ಮುಖ್ಯಮಂತ್ರಿ ಮಾಡಿದ್ದಾರೆಂಬ ಋಣ ತೀರಿಸಿಕೊಳ್ಳುವುದಕ್ಕಾಗಿ ಗುಲಾಮಿ ಚಿಂತನೆಯನ್ನು ಶಿಕ್ಷಣದಲ್ಲಿ ತುರುಕುತ್ತೀರಾ ? ಸಿಎಂ ಸಿದ್ಧರಾಮಯ್ಯರನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಅಧಿಕಾರಕ್ಕೆ ಬಂದು ತಿಂಗಳು ಕಳೆಯುವಷ್ಟರಲ್ಲೇ ಸಿದ್ದರಾಮಯ್ಯ ಸರ್ಕಾರ ಪಠ್ಯ-ಪುಸ್ತಕ ಪರಿಷ್ಕರಣೆಗೆ ಕೈ ಹಾಕಿದೆ. ಪಠ್ಯದಲ್ಲಿ ಭಾರತೀಯತೆ, ಸಂಸ್ಕ್ರತಿ ಹಾಗೂ ಇತಿಹಾಸದ ನೈಜ್ಯ ಸತ್ಯಗಳೇನು ಎಂಬುದು ವಿದ್ಯಾರ್ಥಿಗಳಿಗೆ ತಿಳಿಯದಂತೆ ಮುಚ್ಚಿಡುವುದು ಸರ್ಕಾರದ ಉದ್ದೇಶವೇ ?ಶಾಲೆಗಳಿಗೆ ಪಠ್ಯ- ಪುಸ್ತಕ ಪೂರೈಕೆಯಾದ ನಂತರ ಪರಿಷ್ಕರಣೆಯ ಹಟವೇಕೆ? ಎಂದು ಪ್ರಶ್ನಿಸಿದ್ದಾರೆ.

ಮಾನ್ಯ ಸಿದ್ದರಾಮಯ್ಯನವರೇ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಇಲಾಖೆಯ ಇತರೆ ವಿಚಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುವುದಕ್ಕಾದರೂ ಅವಕಾಶ ಕೊಡಿ. ಅದನ್ನು ಬಿಟ್ಟು ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಕಲಿಸುವ ಪಾಠ ಯಾವುದೆಂದು ನಿರ್ಧರಿಸಿ ಎಂದು ನೀವು ಪಾಠ ಮಾಡಬೇಡಿ ಎಂದಿದ್ದಾರೆ.

ನಾನು ಮೇಷ್ಟ್ರಾಗಿದ್ದೆ ಕಣ್ರಿ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡುವುದಕ್ಕೆ ಮುನ್ನ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಮಸ್ಯೆ ಮೊದಲು ಅರ್ಥ ಮಾಡಿಕೊಳ್ಳಿ. ಪಠ್ಯ ಪರಿಷ್ಕರಣೆ ಬಗ್ಗೆ ನಿಮಗಿರುವ ಧಾವಂತ ನೋಡಿದರೆ ಶಿಕ್ಷಣ ಇಲಾಖೆಯನ್ನು ಮೂರನೇ ವ್ಯಕ್ತಿಗಳು ನಿಯಂತ್ರಿಸುತ್ತಿರುವ ಅನುಮಾನ ಬರುತ್ತಿದೆ. ಸಿದ್ದರಾಮಯ್ಯನವರೇ ನಿಮಗೆ ಶ್ರೇಷ್ಠ ಭಾರತೀಯ ಚಿಂತನೆಗಳು, ನಿಜವಾದ ಆದರ್ಶ ಪುರುಷ ಯಾರಾಗಬೇಕು ? ತಾಯಿ ಭಾರತೀಯ ಅಮರಪುತ್ರರು ಎಂಬ ವಿಚಾರಗಳು ಹೇಗೆ ಇಷ್ಟವಾಗುತ್ತದೆ ಹೇಳಿ? ನಿಮ್ಮ ದೃಷ್ಟಿಯಲ್ಲಿ ಶಾಲಾ ಪಠ್ಯದಲ್ಲಿ ನಕಲಿ ಗಾಂಧಿ ಕುಟುಂಬದ ಚರಿತ್ರೆ, ವಿದೇಶಿ ದಾಳಿಯ ವಿಕೃತಿಗಳು ಮಾತ್ರ ತುಂಬಿರಬೇಕಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *