ನವದೆಹಲಿ: ಪ್ಯಾರಸಿಟಮಾಲ್ ಸೇರಿದಂತೆ ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಿರುವ 14 ಸ್ಥಿರ ಡೋಸ್ ಸಂಯೋಜನೆಯ (ಎಫ್ ಡಿಸಿ) ಔಷಧಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ.
ಈ ಔಷಧಗಳು ಯಾವುದೇ ‘ಚಿಕಿತ್ಸಕ ಸಮರ್ಥನೆ’ ಹೊಂದಿಲ್ಲ ಹಾಗೂ ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಲ್ಲವು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸ್ಥಿರ ಡೋಸ್ ಸಂಯೋಜನೆಯೆಂದ್ರೆ (ಎಫ್ ಡಿಸಿ) ಎರಡು ಅಥವಾ ಅದಕ್ಕಿಂತ ಹೆಚ್ಚಿನ ಔಷಧಗಳ ನಿರ್ದಿಷ್ಟ ಡೋಸೇಜ್ ಸಂಯೋಜನೆ. ಇನ್ನು ಈ ಡ್ರಗ್ಸ್ ಗಳನ್ನು ಮೊದಲ ಬಾರಿಗೆ ಸಂಯೋಜನೆಗೊಳಿಸಿದರೆ ಅದನ್ನು ಹೊಸ ಡ್ರಗ್ ಎಂದೇ ಪರಿಗಣಿಸಲಾಗುತ್ತದೆ. ನಿಷೇಧಿತ ಔಷಧಗಳ ಪಟ್ಟಿಯಲ್ಲಿ ಕೆಮ್ಮು ಮತ್ತು ಜ್ವರದಂತಹ ಸಾಮಾನ್ಯ ಸೋಂಕುಗಳ ಚಿಕಿತ್ಸೆಗೆ ಬಳಸುವ ನಿಮೆಸುಲೈಡ್ + ಪ್ಯಾರಸಿಟಮಾಲ್ ಡಿಸ್ಪರ್ಸಿಬಲ್ ಮಾತ್ರೆಗಳು, ಕ್ಲೋರ್ಫೆನಿರಮೈನ್ ಮಲೇಟ್ + ಕೊಡೈನ್ ಸಿರಪ್, ಫೋಲ್ಕೊಡೈನ್ + ಪ್ರೊಮೆಥಾಜಿನ್, ಅಮೋಕ್ಸಿಸಿಲಿನ್ + ಬ್ರೋಮ್ಹೆಕ್ಸಿನ್ ಮತ್ತು ಬ್ರೋಮ್ಹೆಕ್ಸಿನ್ + ಡೆಕ್ಸ್ಟ್ರೊಮೆಥೋರ್ಫಾನ್ + ಅಮೋನಿಯಮ್ + ಪ್ಯಾರಾಸೆಟಾ + ಪ್ಯಾರಾಸೆಟಾ + ಕ್ಲೋರೈಡ್ ಫೆನೈಲ್ಫ್ರಿನ್ + ಕ್ಲೋರ್ಫೆನಿರಮೈನ್ + ಗ್ವೈಫೆನೆಸಿನ್ ಮತ್ತು ಸಾಲ್ಬುಟಮಾಲ್ + ಬ್ರೋಮ್ಹೆಕ್ಸಿನ್ ಸಂಯೋಜನೆಗಳು ಸೇರಿವೆ.

ತಜ್ಞರ ಸಮಿತಿ ಈ ಸಂಬಂಧ ಸರ್ಕಾರಕ್ಕೆ ನೀಡಿರುವ ಶಿಫಾರಸುಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಸಂಸತ್ ಸ್ಥಾಯಿ ಸಮಿತಿ ಸಿಡಿಎಸ್ ಸಿಒ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್) ಕಾರ್ಯನಿರ್ವಹಣೆ ಬಗ್ಗೆ ತನ್ನ 59ನೇ ವರದಿಯಲ್ಲಿ ಉಲ್ಲೇಖಿಸಿದ್ದು, ಕೆಲವು ರಾಜ್ಯ ಪರವಾನಗಿ ಪ್ರಾಧಿಕಾರಿಗಳು ಸಿಡಿಎಸ್ ಸಿಒನಿಂದ (CDSCO) ಮುಂಚಿತವಾಗಿ ಒಪ್ಪಿಗೆ ಪಡೆಯದೆ ದೊಡ್ಡ ಸಂಖ್ಯೆಯ ಎಫ್ ಡಿಸಿಗಳ ( FDCs) ಉತ್ಪಾದನೆಗೆ ಪರವಾನಗಿ ನೀಡಿವೆ ಎಂಬ ವಿಚಾರವನ್ನು ಪ್ರಸ್ತಾಪಿಸಿತ್ತು. ಈ ರೀತಿ ಎಫ್ ಡಿಸಿಗಳ ಉತ್ಪಾದನೆಗೆ ಪರವಾನಗಿ ನೀಡಿರುವ ಕಾರಣ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಎಫ್ ಡಿಸಿ ಔಷಧಗಳು ದೊರೆಯುತ್ತಿವೆ. ಈ ಔಷಧಗಳ ಸಾಮರ್ಥ್ಯ ಹಾಗೂ ಸುರಕ್ಷತೆಯನ್ನು ಪರೀಕ್ಷಿಸದ ಕಾರಣ ಇವು ರೋಗಿಗಳನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

