ಉಡುಪಿ: ವಿದ್ಯುತ್ ಲೈನ್ ಅಳವಡಿಸುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕಾರ್ಮಿಕನೋರ್ವ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ದಾರುಣ ಘಟನೆ ಉಡುಪಿ ತಾಲೂಕಿನ ಹಿರಿಯಡ್ಕ ಸಮೀಪದ ಪೆಲತ್ತೂರು ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಮರ್ಣೆ ಗ್ರಾಮದ ಅಜೆಕಾರು ಗುಡ್ಡೆಯಂಗಡಿ ನಿವಾಸಿ ಸತೀಶ್ ಶೆಟ್ಟಿ ಎಂಬವರು ಮೃತಪಟ್ಟವರು. ಅವರು ಹಲವು ಸಮಯದಿಂದ ಹಿರಿಯಡ್ಕದ ವಿದ್ಯುತ್ ಗುತ್ತಿಗೆದಾರರೊಬ್ಬರ ಬಳಿ ವಿದ್ಯುತ್ ಕಂಬ ಹಾಗೂ ಲೈನ್ ಎಳೆಯುವ ಕೆಲಸ ಮಾಡಿಕೊಂಡಿದ್ದರು. ಎಂದಿನಂತೆ ಮಂಗಳವಾರ ವಿದ್ಯುತ್ ಲೈನ್ ಅಳವಡಿಸುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿದೆ ಎನ್ನಲಾಗಿದೆ.
ಆದರೆ ಸತೀಶ್ ಶೆಟ್ಟಿಯವರು ವಿದ್ಯುತ್ ಲೈನ್ ಅಳವಡಿಕೆ ಕಾಮಗಾರಿ ಮುಗಿದ ಬಳಿಕ ದುರಸ್ತಿಗಾಗಿ ಮತ್ತೆ ಹೈಟೆನ್ಷನ್ ವಿದ್ಯುತ್ ಕಂಬ ಏರಿ ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.ಆದರೆ ಕಾಮಗಾರಿ ಮುಗಿದ ಬಳಿಕ ವಿದ್ಯುತ್ ಚಾರ್ಜ್ ಮಾಡುವ ವಿಚಾರ ಗೊತ್ತಿದ್ದರೂ ಕಂಬ ಹತ್ತುವ ಅನಿವಾರ್ಯತೆ ಏಕೆ ಎನ್ನುವ ಪ್ರಶ್ನೆ ಮೂಡುತ್ತದೆ. ಅಲ್ಲದೇ ಈ ಅವಘಡದ ವಿಚಾರವಾಗಿ ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ.

ಈ ದುರ್ಘಟನೆಯ ಕುರಿತಂತೆ ಮೆಸ್ಕಾಂ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ವಿದ್ಯುತ್ ಅವಘಡಕ್ಕೆ ನಿಜವಾದ ಕಾರಣ ಏನು ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
ಆದರೆ ಮೃತಪಟ್ಟ ಸತೀಶ್ ಶೆಟ್ಟಿ ಕುಟುಂಬಕ್ಕೆ ಪರಿಹಾರ ನೀಡುವ ಹೊಣೆಯನ್ನು ಯಾರು ವಹಿಸುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.

