Share this news

ಮೂಡುಬಿದಿರೆ: ಯುದ್ಧವನ್ನು ಮಾಡುವಾಗ ಮುಖ್ಯವಾಗಿ ಜಯ ಸಾಧಿಸಬೇಕು, ಯಾವುದೇ ಪ್ರಾಣಹಾನಿಯಾಗಲಾರದು ಎಂದುಕೊಂಡು ನಾವು ಯುದ್ಧ ಮಾಡುತ್ತೇವೆ. ಯುದ್ಧ ಮಾಡುವವರಿಗೆ ಗಂಡೆದೆ ಮತ್ತು ಗುಂಡಿಗೆ ಬೇಕು. ಪಾಕಿಸ್ತಾನ ಆಕ್ರಮಿಸಿಕೊಂಡಿದ್ದ ನಮ್ಮ ಪ್ರದೇಶವನ್ನು ಹಿಂಪಡೆಯಲು ಭಾರತೀಯ ಸೈನಿಕರು ಹಲವಾರು ಸಮಸ್ಯೆಗಳನ್ನು ಎದುರಿಸಿದರು. ಆದರೆ ಅದನ್ನೆಲ್ಲಾ ಮೆಟ್ಟಿ ನಿಂತು ಭಾರತೀಯರು ಹೋರಾಡಿ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿದರು. ಈ ಕಾರಣಕ್ಕೆ ಕಾರ್ಗಿಲ್ ನಲ್ಲಿ ಹೋರಾಡಿದ ಸೈನಿಕರಿಗೆ ವಿಶೇಷ ಗೌರವ ನೀಡಬೇಕು. ನಿಜವಾದ ಹೀರೋ ಯಾರು ಎಂದು ಕೇಳಿದರೆ ಸೈನಿಕರ ಹೆಸರು ನಮ್ಮ ಬಾಯಲ್ಲಿ ಬರಬೇಕು. ಕುಟುಂಬವನ್ನು ಮರೆತು ಭಾರತ ಮಾತೆಯ ರಕ್ಷಣೆಯಲ್ಲಿರುವ ಎಲ್ಲಾ ಸೈನಿಕರನ್ನು ಸ್ಮರಿಸಿಕೊಳ್ಳಬೇಕು ಎಂದು ಸುಮೇಧಾ, ವಿಶಾಖ ಪಟ್ಟಣಂನಲ್ಲಿ ಭಾರತೀಯ ನೌಕ ಪಡೆಯ ಸಶಸ್ತ್ರ ಪಡೆಯಲ್ಲಿ ಕಾರ್ಯ ನಿರ್ವಾಹಕರಾಗಿರುವ ಹವ್ಯಾಸ್ ಯುವ ಹೇಳಿದರು.

ಅವರು ಮೂಡಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತಾನಾಡಿ, ಸೈನಿಕರು ತಮ್ಮ ಜೀವವನ್ನೇ ದೇಶಕ್ಕಾಗಿ ನೀಡಿರುತ್ತಾರೆ ನಾವು ಕಲಿತ ಶಿಕ್ಷಣ ಸಾರ್ಥಕತೆ ಪಡೆಯಬೇಕಾದರೆ ದೇಶಾಭಿಮಾನ ಹೊಂದಿ ದೇಶವನ್ನು ಅಭ್ಯುದಯದ ಕಡೆಗೆ ಕೊಂಡೊಯ್ಯಬೇಕು ಎಂದರು.

ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ನಂತರ ಎಕ್ಸಲೆಂಟ್ ಪ್ರೌಢಶಾಲೆಯ ನೂತನ ಎನ್ ಸಿ ಸಿ, ನೇವಿವಿಂಗನ್ನು ಉದ್ಘಾಟಿಸಲಾಯಿತು.

ಭಾರತೀಯ ಸೇನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ 14 ವರ್ಷ ಅರುಣಾಚಲ ಪ್ರದೇಶ ಕಾರ್ಗಿಲ್, ಪಂಜಾಬ್, ರಾಜಸ್ಥಾನ್, ಹೈದರಬಾದ್, ಪಶ್ಚಿಮ ಬಂಗಾಳ, ಅಸ್ಸಾಂ, ಬೆಂಗಳೂರು ಹೀಗೆ ದೇಶದ ಗಡಿಗಳಲ್ಲಿ ಸುಮಾರು 24 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಶಿಸ್ತು ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ನಾಯಕ್ ಸುಬೇದರ್ ಹರೀಶ್, ಸುಮಾರು 20 ವರ್ಷಗಳ ಕಾಲ ಭಾರತೀಯ ಭೂಸೇನೆಯಲ್ಲಿ ಮದ್ರಾಸ್ ರೆಸಿಮೆಂಟ್ನಲ್ಲಿ ಹವಲ್ದಾರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಬಿ.ಎಸ್.ವಿಠ್ಠಲ್ ರೈ, 18 ವರ್ಷಗಳ ಕಾಲ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಾಯಕ್ ಮುತ್ತೆಪ್ಪ, 3ಇಎಮ್ ಇ ಭೂಪಾಲ್, ಪಂಜಾಬ್ ರಾಜಸ್ಥಾನ್ ಶ್ರೀನಗರ್ ಹೀಗೆ ದೇಶದ ಹಲವು ಪ್ರದೇಶಗಳಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಾಯಕ್ ರತ್ನಾಕರ್ ಹಾಗೂ 17 ವರ್ಷಗಳ ಕಾಲ ಭಾರತೀಯ ಭೂಸೇನೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ನಾಯಕ್ ಯೋಗೀಶ್ ಪೂಜಾರಿ ಇವರೆಲ್ಲರ ಸೇವೆಯನ್ನು ಸ್ಮರಿಸಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ, ತಾಯಿ ಮತ್ತು ತಾಯಿ ಭೂಮಿ ಎರಡನ್ನೂ ಪ್ರೀತಿಸುವ ಶಕ್ತಿ ಸೈನಿಕರಿಗೆ ಇರುತ್ತದೆ. ನಮ್ಮ ಸುರಕ್ಷತೆಗೆ ಕಾರಣ ಗಡಿಯಲ್ಲಿ ನಮ್ಮನ್ನು ಕಾಯುವ ಸೈನಿಕರು. ಹಾಗಾಗಿ ಅವರನ್ನು ಪ್ರತಿ ದಿನ ಪ್ರತಿ ಕ್ಷಣ ಗೌರವದಿಂದ ಕಾಣಬೇಕು. ಬದುಕು ಹೇಗಿದೆ ಎನ್ನುವುದು ಮುಖ್ಯವಲ್ಲ ಅದನ್ನು ನಾವು ಹೇಗೆ ಜೀವಿಸಬೇಕು ಎನ್ನುವುದು ಮುಖ್ಯ. ಎಲ್ಲರಿಗೂ ನಮ್ಮ ದೇಶದ ಮೇಲೆ ಅಭಿಮಾನ ಇರಬೇಕು. ನಮ್ಮ ದೇಶ ಯಾರು ನಿಂದಿಸದೆ ಇರುವ ಹಾಗೆ ನೋಡಿಕೊಳ್ಳೋಣ ಇದು ನಮ್ಮ ದೇಶಕ್ಕೆ ನಾವು ನೀಡುವ ಕೊಡುಗೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತ ನಿರ್ದೇಶಕರಾದ ಸಂಪತ್ ಕುಮಾರ್, ಮುಖ್ಯೋಪಾಧ್ಯಾಯರು, ಸಹ ಮುಖ್ಯೋಪಾಧ್ಯಾಯರು, ಪದವಿ ಪೂರ್ವ ಕಾಲೇಜಿನ ಎನ್ ಸಿ ಸಿ, ಭೂ ಸೇನೆ ಹಾಗೂ ಪ್ರೌಢಶಾಲೆಯ ನೌಕದಳದ ಅಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಅಖಿಲೇಶ್ ಅತಿಥಿಗಳನ್ನು ಪರಿಚಯಿಸಿದರು. ನವ್ಯ ಸ್ವಾಗತಿಸಿದರು. ಅಲ್ಸೀಯಾ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *