ನವದೆಹಲಿ: ಔಷಧ ಖರೀದಿಸಲು ರೋಗಿಗಳು ಸಾಕಷ್ಟು ಹಣ ವ್ಯಯ ಮಾಡುತ್ತಿರುವುದನ್ನು ತಪ್ಪಿಸಲು ದೇಶದ ವೈದ್ಯರು ರೋಗಿಗಳಿಗೆ ಜೆನೆರಿಕ್ ಔಷಧಗಳನ್ನೇ ಶಿಫಾರಸು ಮಾಡಬೇಕು ಹಾಗೂ ಅನಗತ್ಯವಾಗಿ ಔಷಧಗಳನ್ನು ಸೂಚಿಸಬಾರದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಕಟ್ಟುನಿಟ್ಟಿನ ಸೂಚನೆ ನೀಡಿದೆ. ಒಂದು ವೇಳೆ, ಜೆನೆರಿಕ್ ಔಷಧ ಬಿಟ್ಟು ಬ್ರ್ಯಾಂಡೆಡ್ ಔಷಧವನ್ನು ವೈದ್ಯರು ಸಲಹೆ ಮಾಡಿದರೆ ಅಂತಹ ವೈದ್ಯರ ಮೇಲೆ ದಂಡ ಹಾಗೂ ನಿರ್ದಿಷ್ಟ ಅವಧಿಗೆ ಲೈಸೆನ್ಸ್ ಅಮಾನತುಗೊಳಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದೆ.

ವೈದ್ಯರು ರೋಗಿಗಳಿಗೆ ಜೆನೆರಿಕ್ ಔಷಧವನ್ನೇ ಶಿಫಾರಸು ಮಾಡಬೇಕು ಎಂಬ ನಿಯಮ ಈಗಲೂ ಇದೆ. 2002ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಬಿಡುಗಡೆ ಮಾಡಿದ್ದ ಆ ನಿಯಮದಲ್ಲಿ ದಂಡದ ಪ್ರಸ್ತಾಪ ಇರಲಿಲ್ಲ. ಹೀಗಾಗಿ ಹೊಸ ನಿಯಮಾವಳಿಗಳಲ್ಲಿ ಅದನ್ನು ಸೇರ್ಪಡೆ ಮಾಡಲಾಗಿದೆ. ಒಂದು ವೇಳೆ ವೈದ್ಯರು ಈ ಸೂಚನೆಯನ್ನು ಉಲ್ಲಂಘಿಸಿದರೆ ವೈದ್ಯರಿಗೆ ಎಚ್ಚರಿಕೆ ನೀಡಲಾಗುತ್ತದೆ ಅಥವಾ ಕಾರ್ಯಾಗಾರ ಅಥವಾ ಶೈಕ್ಷಣಿಕ ಕಾರ್ಯಕ್ರಮ ಅಥವಾ ವೃತ್ತಿಪರ ತರಬೇತಿಯಲ್ಲಿ ಪಾಲ್ಗೊಳ್ಳುವಂತೆ ನಿರ್ದೇಶಿಸಲಾಗುತ್ತದೆ. ಆದಾಗ್ಯೂ ನಿಯಮವನ್ನು ಪದೇ ಪದೇ ಉಲ್ಲಂಘಿಸಿದರೆ ನಿರ್ದಿಷ್ಟಅವಧಿಗೆ ವೈದ್ಯ ವೃತ್ತಿ ಅಭ್ಯಾಸ ಮಾಡುವ ಲೈಸೆನ್ಸ್ ರದ್ದುಗೊಳಿಸಲಾಗುತ್ತದೆ ಎಂದು ನಿಯಮಾವಳಿಯಲ್ಲಿ ತಿಳಿಸಲಾಗಿದೆ.

ಜನೌಷಧಿ ಕೇಂದ್ರಗಳು ಹಾಗೂ ಇನ್ನಿತರೆ ಜೆನೆರಿಕ್ ಔಷಧ ಮಳಿಗೆಗಳಿಂದ ಜೆನೆರಿಕ್ ಔಷಧ ಖರೀದಿಸುವಂತೆ ರೋಗಿಗಳಿಗೆ ವೈದ್ಯರು ಸಲಹೆ ಮಾಡಬೇಕು. ಸಾಕಷ್ಟು ಜೆನೆರಿಕ್ ಔಷಧ ದಾಸ್ತಾನು ಇಟ್ಟುಕೊಳ್ಳುವಂತೆ ಆಸ್ಪತ್ರೆಗಳು ಹಾಗೂ ಸ್ಥಳೀಯ ಔಷಧ ಅಂಗಡಿಗಳಿಗೂ ವೈದ್ಯರು ಸೂಚಿಸಬೇಕು. ಬ್ರ್ಯಾಂಡೆಡ್ ಔಷಧಿಗೂ ಜೆನೆರಿಕ್ ಔಷಧಿಗೂ ವ್ಯತ್ಯಾಸವಿಲ್ಲ ಎಂದು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಜೆನೆರಿಕ್ ಔಷಧ ಉತ್ತೆ?ಜನಕ್ಕೆ ಸಂಬAಧಿಸಿದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ನಿರ್ದೇಶಿಸಿದೆ.


