ಕಾರ್ಕಳ: ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಸೇವೆಯಿಂದ ನಿವೃತ್ತರಾಗಿರುವ ಗೋಪಾಲಕೃಷ್ಣ ಶೆಟ್ಟಿಯವರನ್ನು ಕಾರ್ಕಳ ಪುರಸಭೆಯ ಪೌರಕಾರ್ಮಿಕರು ಅವರ ಮನೆಗೆ ತೆರಳಿ ಸನ್ಮಾನಿಸಿದರು.

ಸೇವೆಯಿಂದ ನಿವೃತ್ತರಾದ ಗೋಪಾಲಕೃಷ್ಣ ಶೆಟ್ಟಿಯವರು ಮೂಲರ್ತ ಕಾರ್ಕಳದವರಾಗಿದ್ದು ಅವರು ಆರಂಭದಲ್ಲಿ ಕಾರ್ಕಳ ಪುರಸಭೆಯಲ್ಲಿ ಸರಕಾರಿ ಸೇವೆಗೆ ಸೇರ್ಪಡೆಯಾಗಿ ಬಳಿಕ ಕಂದಾಯ ನಿರೀಕ್ಷಕರಾಗಿ ಮುಂದೆ ನಾಲ್ಕೂವರೆ ವರ್ಷಗಳ ಕಾಲ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕಾರ್ಕಳ ಪುರಸಭೆಯಲ್ಲಿ 2009ರಿಂದ 2013ರವರೆಗೆ ಮುಖ್ಯಾಧಿಕಾರಿಯಾಗಿ ಸಲ್ಲಿಸಿದ್ದ ಸಂದರ್ಭದಲ್ಲಿ ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸಹಕರಿಸಿರುವುದನ್ನು ನೆನಪಿಸಿದ ಪೌರಕಾರ್ಮಿಕರು ನಿವೃತ್ತ ಅಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರನ್ನು ಸನ್ಮಾನಿಸಿದರು.

ನಗರದ ಸ್ವಚ್ಛತೆಯ ಜತೆಗೆ ಜನತೆಯ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರ ಸೇವೆ ಗಣನೀಯವಾಗಿದ್ದು ಅಂತಹ ಪೌರಕಾರ್ಮಿಕರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದವರನ್ನು ಕೂಡಾ ಮರೆಯುವುದಿಲ್ಲ ಎನ್ನುವುದಕ್ಕೆ ಈ ಕಾರ್ಯಕ್ರಮ ಕೂಡಾ ಸಾಕ್ಷಿಯಾಗಿದೆ. ಪೌರಕಾರ್ಮಿಕರ ಸನ್ಮಾನ ನನಗೆ ಸಿಕ್ಕ ಉನ್ನತ ಗೌರವವಾಗಿದೆ, ಅವರ ಸನ್ಮಾನಕ್ಕಿಂತ ಅವರು ತೋರಿದ ಪ್ರೀತಿಗೆ ನಾನು ಸದಾ ಚಿರಋಣಿಯಾಗಿದ್ದೇನೆ ಎಂದು ನಿವೃತ್ತ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಪ್ರತಿಕ್ರಿಯಿಸಿದರು

