Share this news

ಹಾಸನ : ಹಾಸನ ಜಿಲ್ಲೆಯ ಹಾಸನಾಂಬಾ ದೇವಸ್ಥಾನವು 12 ನೇ ಶತಮಾನದ ಅತ್ಯಂತ ಪ್ರಾಚೀನ ಶಕ್ತಿಪೀಠವಾಗಿದೆ. ಭಗವಾನ್ ಶಿವನ ಅವತಾರಿ ಸಪ್ತಮಾತೃಕೆಯರಾದ ವೈಷ್ಣವಿ, ಮಾಹೇಶ್ವರಿ ಮತ್ತು ಕೌಮಾರಿ ದೇವಿಗಳ ವಾಸಸ್ಥಾನವಾಗಿದೆ. ಈ ಪವಿತ್ರ ಶ್ರೀ ದೇವಿಯರ ಕ್ಷೇತ್ರಕ್ಕೆ ಜಗತ್ತಿನಾದ್ಯಂತ ಭಕ್ತಾಧಿಗಳು ಬರುತ್ತಾರೆ. ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ಪ್ರಕಾರ ದೇವರ ದರ್ಶನವನ್ನು ಪಡೆಯುವಾಗ ಭಾರತೀಯ ಸಾತ್ತ್ವಿಕ ಉಡುಪುಗಳನ್ನು ಧರಿಸಬೇಕೆಂಬ ನಿಯಮವಿದೆ. ಸ್ತ್ರೀಯರು ಸೀರೆ, ಭಾರತೀಯ ಉಡುಪುಗಳನ್ನು ಧರಿಸುವುದು, ಅದೇ ರೀತಿಯಲ್ಲಿ ಪುರುಷರು ಸಾತ್ತ್ವಿಕ ಉಡುಪು ಧರಿಸಿ ದೇವತೆಗಳ ದರ್ಶನ ಪಡೆದರೆ, ಅವರಲ್ಲಿ ದೇವತೆಗಳ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗುತ್ತದೆ.
ಆದ್ದರಿಂದ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿ ಮಾಡಬೇಕು ಮತ್ತು ಹಣೆಗೆ ಕುಂಕಮ ಹಚ್ಚಲು ಕುಂಕುಮದ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಹಾಸನದ ಜಿಲ್ಲಾಧಿಕಾರಿಗಳಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ ಮಾಡಲಾಯಿತು.

ಇಂದು ಜನರು ಆಧುನಿಕ ಜಗತ್ತಿಗೆ ಮಾರು ಹೋಗಿ, ದೇವರ ದರ್ಶನ ಪಡೆಯುವಾಗ ಪಾಶ್ಚಾತ್ಯ ಅಸಾತ್ತ್ವಿಕ ಉಡುಪು, ಕೂದಲು ಹರಡಿಕೊಳ್ಳುವುದು, ಅಸಭ್ಯ ವರ್ತನೆ, ಮುಂತಾದ ವಿದೇಶಿ ರೀತಿಯಲ್ಲಿ ಸಂಸ್ಕೃತಿಶೂನ್ಯ ರಜ-ತಮ ಪ್ರಧಾನ ಉಡುಪುಗಳ ಧಾರಣೆ ಮತ್ತು ದೇವಸ್ಥಾನಗಳ ಒಳಗೆ ಮೊಬೈಲ್‌ಗಳ ಬಳಕೆ, ಮುಂತಾದ ಧರ್ಮಹಾನಿ ಕೃತಿಗಳಿಂದ ದೇವಸ್ಥಾನದ ಸಾತ್ತ್ವಿಕತೆ, ಪಾವಿತ್ರ್ಯತೆಗೆ ಭಂಗ ಉಂಟಾಗುತ್ತಿದೆ. ಜೊತೆಗೆ ನಿಜವಾದ ಭಾವಿಕ ಭಕ್ತರು ದೈವಿ ಚೈತನ್ಯದ ಪೂರ್ಣ ಲಾಭ ಪಡೆಯುವುದರಿಂದ ವಂಚಿತರಾಗುತ್ತಾರೆ. ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ಇಂದು ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ಸಹ ವಸ್ತ್ರಸಂಹಿತೆ ಅಳವಡಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ಧಾರ್ಮಿಕ ಪರಿಷತ್ ಸಹ ರಾಜ್ಯದ ೨೧೧ ಎ ಗ್ರೇಡ್ ದೇವಸ್ಥಾನಗಳಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಿದೆ. ಈಗಾಗಲೇ ಚಿಕ್ಕಮಗಳೂರಿನ ಇತಿಹಾಸ ಪ್ರಸಿದ್ದ ದೇವಿರಮ್ಮನ ದೇಗುಲದಲ್ಲಿ ಆಡಳಿತ ಮಂಡಳಿ ವಸ್ತ್ರಸಂಹಿತೆ ಜಾರಿ ಮಾಡಿದೆ. ಅದೇ ರೀತಿಯಲ್ಲಿ ಹಾಸನಾಂಬಾ ದೇವಸ್ಥಾನದಲ್ಲಿ ಸಹ ವಸ್ತ್ರಸಂಹಿತೆ ಜಾರಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸುಜಾತ ನವೀನ, ಭಾರತೀಯ ವೈದ್ಯಕೀಯ ಸಂಘ, ಹಾಸನದ ಮಾಜಿ ಅಧ್ಯಕ್ಷರಾದ ಡಾ. ಎನ್ ರಮೇಶ ಮತ್ತಿತರರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *