ಕಾರ್ಕಳ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಶಾಲೆಯಲ್ಲಿ ಕಲ್ಪಿಸಿಕೊಡಬೇಕು. ಇದರಲ್ಲಿ ಸಮುದಾಯದ ಪಾತ್ರ ಬಹಳ ಮುಖ್ಯವಾದದ್ದು. ಮಕ್ಕಳಲ್ಲಿ ಬಾಲ್ಯದಲ್ಲಿಯೇ ಭಾಷಾ ಕೌಶಲವನ್ನು ಬೆಳೆಸಬೇಕು. ಹಾಗಾಗಿ ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು. ವಿದ್ಯೆ ಇದ್ದರೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಬಹುದು ಎಂದು ಇಸ್ರೋದ ನಿವೃತ್ತ ವಿಜ್ಞಾನಿ ಜನಾರ್ಧನ ಇಡ್ಯಾ ಹೇಳಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಕಾರ್ಕಳ ಇಲ್ಲಿ ನಡೆದ ದಾನಿಗಳಿಂದ ಕೊಡಮಾಡಿದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ರೊ.ಜಾನ್ ಡಿ’ಸಿಲ್ವ ಮಾತನಾಡಿ, ರೋಟರಿ ಸಂಸ್ಥೆ ಸಮುದಾಯದ ಅಭಿವೃದ್ಧಿಗೆ ಸದಾ ನೆರವು ನೀಡುತ್ತಿದೆ. ಶಾಲೆಗಳಿಗೆ ನೀಡಿದ ದಾನ ದೇವರಿಗೆ ಸಲ್ಲುತ್ತದೆ. ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿ ಕೆಲಸಗಳಲ್ಲಿ ನಮ್ಮ ರೋಟರಿ ಸಂಸ್ಥೆ ಸದಾ ಜೊತೆಯಲ್ಲಿ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಲೆಕ್ಕ ಪರಿಶೋಧಕ ಕೆ.ಕಮಲಾಕ್ಷ ಕಾಮತ್ ಮಾತನಾಡಿ, ಶಾಲೆಗೆ ನೀಡಿದ ಸೇವೆ ದೇವರ ಸೇವೆ .ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ಜೊತೆಗೆ ಶಿಸ್ತು, ಸಂಸ್ಕಾರ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಕಳ ರೋಟರಿ ಕ್ಲಬ್ ವತಿಯಿಂದ ಶಾಲೆಯ ನಲಿಕಲಿ ತರಗತಿಗೆ ಮೂರು ಟೇಬಲ್ ಹಾಗೂ 20 ಕುರ್ಚಿ, ಬಾಲಾಜಿ ಜ್ಯುವೆಲ್ಲರ್ಸ್ ಮಾಲಕ ಪ್ರಭಾಕರ್ ಪಾಟೀಲ್ ಹಾಗೂ ಊರ್ಮಿಳಾ ಶಿಂಧೆ ದಂಪತಿಗಳು ನೀಡಿದ ಮೈಕ್ ಮತ್ತು ಧ್ವನಿವರ್ಧಕ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಕಮಲಾಕ್ಷ ಕಾಮತ್ ಕೊಡಮಾಡಿದ ಕೊಡೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಶಿಕ್ಷಣ ಇಲಾಖೆಯ ಸಾಣೂರು ಕ್ಲಸ್ಟರ್ CRP ಶ್ರೀಮತಿ ಜ್ಯೋತಿ ನಾಯಕ್, ಜಯಂತಿ ನಗರ CRP ಪ್ರೇಮಾ , ರೋಟರಿ ಕ್ಲಬ್ ನ ರೊ.ಮಧುಕರ ಹೆಗ್ಡೆ, ರೊ. ಶೈಲೇಂದ್ರ ರಾವ್, ರೊ.ಇಕ್ಬಾಲ್ ಅಹಮದ್, ಶಾಲಾ ಶಿಕ್ಷಕಿಯರಾದ ಅಶ್ವಿನಿ ನಾಯಕ್, ಶ್ರೇಯಾ , ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶೋಭಾ ಹಾಗೂ ಶಾಲಾ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಹಾಗೂ ಪದವೀಧರ ಸಹ ಶಿಕ್ಷಕಿ ಪ್ರತಿಮಾ ಎಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕಿ ಶಶಿಕಲಾ ಸ್ವಾಗತಿಸಿ, ಹಿರಿಯ ಸಹ ಶಿಕ್ಷಕಿ ಗ್ರೇಸ್ ವಜ್ರಾವತಿ ವಂದಿಸಿದರು.