ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಮೃದುವಾಗಿ ಲ್ಯಾಂಡ್ ಆಗಿ ಚಂದ್ರಯಾನ 3 ಯಶಸ್ವಿಯಾಗಿತ್ತು. ಇದೀಗ ಮತ್ತೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗಿದೆ. ವಿಕ್ರಮ್ ಲ್ಯಾಂಡರ್ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.
ಬಾಹ್ಯಾಕಾಶ ನೌಕೆಯು ಕೇವಲ 40 ಸೆಂಟಿಮೀಟರ್ಗಳಷ್ಟು ಎತ್ತರಕ್ಕೆ ಹಾರಿತು ಮತ್ತು 30 ರಿಂದ 40 ಸೆಂಟಿಮೀಟರ್ಗಳ ನಡುವೆ ಬದಿಗೆ ಚಲಿಸಿತು.ಇದರಿಂದಾಗಿ ಭವಿಷ್ಯದಲ್ಲಿ ಚಂದ್ರನಿಂದ ಯಶಸ್ವಿಯಾಗಿ ವಾಪಾಸ್ ಬರುವ ಮಾದರಿಗಳು ಹಾಗೂ ಯಶಸ್ವಿ ಮಾನವ ಸಹಿತ ಕಾರ್ಯಾಚರಣೆಗಳಿಗೆ ನೆರವಾಗಲಿದೆ. ಎಲ್ಲಾ ವ್ಯವಸ್ಥೆಗಳು ಉತ್ತಮವಾಗಿ ನಿರ್ವಹಣೆ ತೋರಿದ್ದು ಮತ್ತು ಆರೋಗ್ಯಕರವಾಗಿವೆ. ನಿಯೋಜಿತ ರಾಂಪ್, ಚಾಸ್ಟೆ ಮತ್ತು ಇಲ್ಸಾಗಳನ್ನು ಹಿಂದಕ್ಕೆ ಮಡಚಲಾಯಿತು ಮತ್ತು ಪ್ರಯೋಗದ ನಂತರ ಯಶಸ್ವಿಯಾಗಿ ಮರುನಿಯೋಜಿಸಲಾಯಿತು ಎಂದು ಇಸ್ರೋ ಬರೆದುಕೊಂಡಿದೆ.
ಶಿವಶಕ್ತಿ ಪಾಯಿಂಟ್ನಲ್ಲಿ ಲ್ಯಾಂಡ್ ಆಗಿದ್ದ ವಿಕ್ರಮ್ ಲ್ಯಾಂಡರ್ನ ಇಂಜಿನ್ಗಳನ್ನು ಮತ್ತೊಮ್ಮೆ ಸ್ಟಾರ್ಟ್ ಮಾಡಿ, ಸ್ವಲ್ಪ ಮೇಲಕ್ಕೆ ಏರಿಸಿ, ಕೊಂಚ ಬದಿಗೆ ಸರಿಸಿ ಲ್ಯಾಂಡ್ ಮಾಡುವ ಉದ್ದೇಶ ಇಸ್ರೋದ ಈ ಯೋಜನೆಗೆ ಇದ್ದಿರಲಿಲ್ಲ. ಆದರೆ. ಚಂದ್ರನಲ್ಲಿ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ನ ಎಲ್ಲಾ ಕೆಲಸಗಳು ಸಂಪೂರ್ಣವಾಗಿ ಪೂರ್ಣಗೊಂಡಿವೆ. ಪ್ರಗ್ಯಾನ್ ಹಾಗೂ ವಿಕ್ರಮ್ ಇನ್ನು ನಿದ್ರಾವಸ್ಥೆಗೆ ಹೋಗಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಕೂಡ ಹೇಳಿದ್ದರು. ಆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಕತ್ತಲು ಆವರಿಸುವ ಮುನ್ನ ಒಂದು ಕೊನೆಯ ಹಂತದ ಪ್ರಯತ್ನವಾಗಿ ಇಸ್ರೋ ಈ ಐತಿಹಾಸಿಕ ಕಾರ್ಯಾಚರಣೆಯನ್ನು ಮಾಡಿದ್ದು, ಅದರಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಇನ್ನು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಕಾಲಿಡುವ ವೇಳೆಗೆ ತನ್ನಲ್ಲಿ ಇನ್ನೂ 150 ಕೆಜಿಯ ಇಂಧನವನ್ನು ಉಳಿಸಿಕೊಂಡಿತ್ತು. ಅದರಿಂದಾಗಿ ಇಸ್ರೋಗೆ ಈ ಕಾರ್ಯಾಚರಣೆ ಮಾಡಲು ಇಂಧನದ ಅವಕಾಶವೂ ಸಿಕ್ಕಿದೆ.