ಬೆಂಗಳೂರು: ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆಗೊಂಡಿರುವ ಭಾರತದ ಆದಿತ್ಯ ಎಲ್ 1 ಭೂಮಿಯ ಸುತ್ತ ಎರಡನೇ ಸುತ್ತನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಮಂಗಳವಾರ (ಸೆ.5) ಇಸ್ರೋ ತಿಳಿಸಿದೆ.
ಮಂಗಳವಾರ ನಸುಕಿನ ವೇಳೆ ಸೂರ್ಯಯಾನದ ಆದಿತ್ಯ ಎಲ್ -1 ಉಪಗ್ರಹ ಭೂಮಿಯನ್ನು ಎರಡನೇ ಬಾರಿ ಯಶಸ್ವಿಯಾಗಿ ಸುತ್ತು ಹಾಕಿದೆ. ಇಸ್ರೋದ ಮಾರಿಷಸ್ ನ ಗ್ರೌಂಡ್ ಸ್ಟೇಷನ್ ಬೆಂಗಳೂರು ಮತ್ತು ಪೋರ್ಟ್ ಬ್ಲೇರ್ ಜಂಟಿಯಾಗಿ ಸ್ಯಾಟಿಲೈಟ್ ಕಾರ್ಯಾಚರಣೆ ಕುರಿತು ನಿಗಾ ವಹಿಸಿದ್ದು ಮಾಹಿತಿ ಕಲೆ ಹಾಕಿರುವುದಾಗಿ ಇಸ್ರೋ ತಿಳಿಸಿದೆ.
ಈಗಾಗಲೇ ಭೂಮಿಗೆ ಎರಡನೇ ಸುತ್ತನ್ನು ಪೂರೈಸಿರುವ ಆದಿತ್ಯ ಎಲ್ -1 ಅನ್ನು ಸೆಪ್ಟೆಂಬರ್ 10 ರ ರಾತ್ರಿ 2.30 ಕ್ಕೆ ಮೂರನೇ ಕಕ್ಷೆಗೆ ಏರಿಸುವ ಕಾರ್ಯ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.
ಭಾರತದ ಮೊದಲ ಆದಿತ್ಯ ಎಲ್ 1 ಸ್ಯಾಟಿಲೈಟನ್ನು ಸೆಪ್ಟೆಂಬರ್. 2ರಂದು ಇಸ್ರೋ ಯಶಸ್ವಿಯಾಗಿ ಉಡಾವಣೆಗೊಳಿಸಿತ್ತು. ಇದೀಗ ಇಸ್ರೋ ಟೆಲಿಮಿಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ಸೆಂಟರ್ ಕಕ್ಷೆ ಬದಲಾವಣೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದೆ.