ಚಿಕ್ಕಮಗಳೂರು: ಶಾಲೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಖಾಸಗಿ ಬಸ್ಸು ಹರಿದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರ ಗೇಟ್ ಲ್ಲಿ ಇಂದು (ಗುರುವಾರ) ಬೆಳಗ್ಗೆ ನಡೆದಿದೆ.
ತುಳಸಿ (15) ಮತ್ತು ನಿವೇದಿತ (14) ಗಂಭೀರವಾಗಿ ಗಾಯಗೊಂಡ ಮಕ್ಕಳು. ಉಳಿದ ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ .
ಪ್ರತಿನಿತ್ಯ ಶಾಲೆಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದು ನಿಲ್ಲುವಂತೆ ಇಂದು ಕೂಡ ಮಕ್ಕಳು ಬಸ್ ನಿಲ್ದಾಣದ ಬಳಿ ಬಂದು ನಿಂತಿದ್ದಾರೆ ಆದರೆ ಅತಿ ವೇಗವಾಗಿ ಬಂದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣದ ಬಳಿ ನಿಂತಿದ್ದ ಮಕ್ಕಳ ಮೇಲೆ ಹರಿದಿದೆ. ಈ ವೇಳೆ ಎಲ್ಲಾ ಮಕ್ಕಳು ಓಡಲು ಮುಂದಾದರೂ ಇಬ್ಬರು ಮಕ್ಕಳಿಗೆ ಬಸ್ ಗುದ್ದಿದೆ .
ಬಸ್ ನ ಚಕ್ರಗಳು ಮಕ್ಕಳ ಮೇಲೆ ಹರಿಯದ ಕಾರಣ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಬಸ್ ಗುದ್ದಿದ ರಭಸಕ್ಕೆ ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಮಕ್ಕಳಿಗೆ ಡಿಕ್ಕಿ ಹೊಡೆದ ನಂತರವೂ ಬಸ್ ನಿಯಂತ್ರಣಕ್ಕೆ ಸಿಗದೇ ರಸ್ತೆ ಬದಿಯಲ್ಲಿದ್ದ ಮರ ಹಾಗೂ ಮನೆಯ ಗೋಡೆಗೆ ಗುದ್ದಿದೆ. ಈ ಘಟನೆಯಲ್ಲಿ ರಸ್ತೆ ಬದಿಯಿದ್ದ ಮನೆಯ ಮುಂಭಾಗದ ಛಾವಣಿಯೂ ಸಂಪೂರ್ಣ ಜಖಂ ಆಗಿದೆ.ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.