ತಿರುಪತಿ : ಯುವಕರಲ್ಲಿ ದೈವಭಕ್ತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ “ಗೋವಿಂದ ಕೋಟಿ” ನಾಮಾವಳಿಯನ್ನು ಬರೆಯುವ ಯುವಕರಿಗೆ ವಿಐಪಿ ದರ್ಶನವನ್ನು ಒದಗಿಸಲು ಟಿಟಿಡಿ ನಿರ್ಧರಿಸಿದೆ.
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ದೇವರ ಮೇಲೆ ಭಕ್ತಿ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಅಂತಹವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಟಿಟಿಡಿ ಈ ನಿರ್ಧಾರಕ್ಕೆ ಬಂದಿದೆ. 25 ವರ್ಷಕ್ಕಿಂತ ಕೆಳಗಿನ ಯುವ ಜನತೆ “ಗೋವಿಂದ ಕೋಟಿ” ಬರೆದಲ್ಲಿ ಅವರಿಗೆ ಹಾಗೂ ಅವರ ಕುಟುಂಬಕ್ಕೆ ವಿಐಪಿ ದರ್ಶನ ಭಾಗ್ಯ ದೊರೆಯಲಿದೆ. ಜೊತೆಗೆ 10,01,116 ಬಾರಿ ಗೋವಿಂದ ನಾಮಾವಳಿ ಬರೆದಲ್ಲಿ ಒಮ್ಮೆ ದರ್ಶನ ಭಾಗ್ಯ ದೊರೆಯಲಿದೆ ಎಂದು ಟಿಟಿಡಿ ಅಧ್ಯಕ್ಷ ಕರುಣಾಕರ ರೆಡ್ಡಿ ತಿಳಿಸಿದ್ದಾರೆ.
ಹೊಸದಾಗಿ ರಚನೆಯಾದ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಮಂಡಳಿಯು ಸೋಮವಾರ ತಿರುಮಲದ ಅನ್ನಮಯ್ಯ ಭವನದಲ್ಲಿ ತನ್ನ ಮೊದಲ ಸಭೆಯನ್ನು ನಡೆಸಿತು ಮತ್ತು ಸನಾತನ ಧರ್ಮವನ್ನು ಉತ್ತೇಜಿಸಲು ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿತು.
ರಾಮ ನಾಮದಂತೆಯೇ ಒಂದು ಕೋಟಿ ಬಾರಿ ಗೋವಿಂದಾ ನಾಮವನ್ನು ಬರೆಯುವ 25 ವರ್ಷಕ್ಕಿಂತ ಕೆಳಗಿನ ಯುವ ಜನತೆ ಮತ್ತು ಅವರ ಕುಟುಂಬಗಳಿಗೆ ವಿಐಪಿ ದರ್ಶನ ದೊರೆಯಲಿದೆ. ಗೋವಿಂದ ನಾಮಾವಳಿ ಎಂದು 10,01,116 ಬಾರಿ ಬರೆಯುವ ಯುವಕರಿಗೆ ಒಂದು ಬಾರಿ ಒಬ್ಬರಿಗೆ ಮಾತ್ರ ದರ್ಶನ ಸೌಲಭ್ಯ ಕಲ್ಪಿಸಲು ಶ್ರೀವಾರಿ ದೇವಸ್ಥಾನ ಟ್ರಸ್ಟ್ ನಿರ್ಧರಿಸಿದೆ.
ಸಭೆಯ ನಂತರ ಮಾತನಾಡಿದ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅವರು ಮಂಡಳಿಯ ನಿರ್ಧಾರಗಳನ್ನು ವಿವರಿಸಿದರು. ಮಕ್ಕಳು ಮತ್ತು ಅವರ ಕುಟುಂಬಗಳಲ್ಲಿ ಭಕ್ತಿಯನ್ನು ಬೆಳೆಸಲು, ನಾವು ಗೋವಿಂದ ಕೋಟಿ ಯಜ್ಞವನ್ನು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು.





