Share this news

ಕಾರ್ಕಳ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಆನ್ಲೈನ್ ವಂಚನೆ ಪ್ರಕರಣ ಹೆಚ್ಚುತ್ತಿದ್ದು , ಈ ಬಗ್ಗೆ ಎಚ್ಚರಿಕೆಯಿಂದಿರುವಂತೆ ಪೊಲೀಸರು ಪದೇಪದೇ ಎಚ್ಚರಿಕೆ ನೀಡುತ್ತಿದ್ದರೂ ಜನರು ಮಾತ್ರ ದುರಾಸೆಗೆ ಬಲಿಯಾಗಿ ಮೋಸ ಹೋಗುವುದು ಮಾತ್ರ ನಿಂತಿಲ್ಲ.

ಸುಲಭವಾಗಿ ಹಣ ಪಡೆಯಬಹುದು ಎಂಬ ಇನ್ಸ್ಟಾಗ್ರಾಂ  ಆ್ಯಪ್ ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ ಹಣದ ಆಸೆಗೆ ಬಲಿಬಿದ್ದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬರೋಬ್ಬರಿ 1.26 ಲಕ್ಷ ಹಣ ಕಳೆದುಕೊಂಡು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಪಶ್ಚಿಮ ಬಂಗಾಳ ಮೂಲದ ಪ್ರಸ್ತುತ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಸೋಹಿನಿ ಮಿಶ್ರಾ (21) ಎಂಬ ವಿದ್ಯಾರ್ಥಿನಿ ಆನ್ ಲೈನ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡವರು. ಇವರು ತಮ್ಮ ಮೊಬೈಲ್ ನಲ್ಲಿರುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಗ್ರೂಪ್ ಆನ್ ಎಂಬ ಕಂಪನಿಯ ಹೆಸರು ಹೇಳಿಕೊಂಡು 500 ರೂಪಾಯಿ ಮೊತ್ತವನ್ನು ಹಾಕಿದರೆ 2ಸಾವಿರ ರೂಪಾಯಿ ವಾಪಸು ಕೊಡುವುದಾಗಿ ನಂಬಿಸಿದ್ದರು. ಅದರಂತೆ ಸೋಹಿನಿಯವರು 500 ರೂಪಾಯಿ ಜಮಾ ಮಾಡಿದಾಗ ಅವರಿಗೆ 2ಸಾವಿರ ರೂ. ಮರಳಿ ಸೋಹಿನಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ನಂತರ ಆ ಸೈಟ್ ನವರು ಇನ್ನೂ ಜಾಸ್ತಿ ಹಣವನ್ನು ಜಮೆ ಮಾಡಿದರೆ ಹೆಚ್ಚಿನ ಹಣ ಪಡೆಯಬಹುದೆಂದು ನಂಬಿಸಿ ಸೋಹಿನಿ ಅವರ ಖಾತೆಯಿಂದ ದುಷ್ಕರ್ಮಿಗಳು ಹಂತ ಹಂತವಾಗಿ ಒಟ್ಟು 1,26,000 ರೂಗಳನ್ನು ತಮ್ಮ ಸೈಟ್ ಗೆ ಜಮೆ ಮಾಡಿಸಿಕೊಂಡಿದ್ದಾರೆ. ಆದರೆ ಪ್ರತೀ ಬಾರಿ ಹಣ ಪಾವತಿಸಿದಾಗ ಸೋಹಿನಿಯವರು ಮರಳಿ ಪಡೆದ ಹಣದ ನಕಲಿ ಪೇಮೆಂಟ್ ವಿವರಗಳನ್ನು ಕಳುಹಿಸುತ್ತಿದ್ದರು ಆದರೆ ಸೋಹಿನಿ ಮಿಶ್ರಾ ಅವರ ಖಾತೆಗೆ ಹಣ ಜಮೆಯಾಗದೇ ಇದ್ದಾಗ ಅವರು ಮೋಸ ಹೋಗಿರುವ ವಿಚಾರ ಬಯಲಾಗಿದೆ. ಇದರಿಂದ ಎಚ್ಚೆತ್ತ ಸೋಹಿನಿ ಮಿಶ್ರಾ ಅವರು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

1930 ಗೆ ಕರೆ ಮಾಡಿ ಆನ್ ಲೈನ್ ವಂಚನೆಯಿಂದ ಪಾರಾಗಿ:

ಸಾಮಾನ್ಯವಾಗಿ ಸುಲಭವಾಗಿ ಹಣ ಗಳಿಸಬೇಕೆಂಬ ದುರಾಸೆಯನ್ನೇ ಬಂಡವಾಳವನ್ನಾಗಿಸಿ ಆನ್ ಲೈನ್ ವಂಚಕರು ನಯವಾಗಿ ಬ್ಲೇಡ್ ಹಾಕಿದರೂ ಜನ ಮಾತ್ರ ಇನ್ನೂ ಬುದ್ದಿ ಕಲಿತಿಲ್ಲ. ಇಂಜಿನಿಯರಿಂಗ್ ವಿದ್ಯಾರ್ಥಿನಿಯೇ ಹಣದ ಆಸೆಗೆ ಬಲಿಬಿದ್ದು ಮೋಸ ಹೋಗಿದ್ದಾಳೆ ಎಂದರೆ ಇನ್ನು ಜನಸಾಮಾನ್ಯರ ಪಾಡೇನು ಎಂಬುದು ಪ್ರಶ್ನೆಯಾಗಿದೆ. ಆದರೆ ಆನ್ ಲೈನ್ ವಂಚನೆಯಿಂದ ಹಣ ಕಳೆದುಕೊಂಡವರು ಮರಳಿ ಹಣ ಪಡೆಯಲು ಗೋಲ್ಡನ್ ಅವರ್ ಬಳಸಿದರೆ ಹಣ ಮರಳಿ ಪಡೆಯುವ ಅವಕಾಶ ಹೆಚ್ಚಿರುತ್ತದೆ. ಅಂದರೆ ವಂಚಕರ ಖಾತೆಗೆ ಆನ್ ಲೈನ್ ಪೇಮೆಂಟ್ ಆದ ಒಂದು ಗಂಟೆಯ ಅವಧಿ ಅತ್ಯಂತ ಪ್ರಮುಖವಾಗಿರುತ್ತದೆ.ಈ ಅವಧಿಯೊಳಗೆ 1930 ಗೆ ಕರೆ ಮಾಡಿದ್ದಲ್ಲಿ ವಂಚಕರ ಖಾತೆಯನ್ನು ಫ್ರೀಜ್ ಮಾಡಿ ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಅವಕಾಶವಿದೆ. ಇದಲ್ಲದೇ 24 ಗಂಟೆಗಳ ಒಳಗಾಗಿಯೂ ಕರೆ ಮಾಡಿದರೂ ಹಣ ಮರಳಿ ಪಡೆಯುವ ಸಾಧ್ಯತೆಯಿದೆ ಆದರೆ ನಿಖರವಾಗಿ ಹಣ ಹಿಂಪಡೆಯುವ ಸಾಧ್ಯತೆ ಕಡಿಮೆಯಿರುತ್ತದೆ. ಆದ್ದರಿಂದ ಆದಷ್ಟು ಆನ್ ಲೈನ್ ವಂಚನೆಗೆ ಬಲಿಯಾಗದೇ ಎಚ್ಚರಿಕೆಯಿಂದ ಇರುವುದು ಒಳಿತು, ಒಂದುವೇಳೆ ವಂಚನೆಗೆ ಒಳಗಾದರೆ ಗೋಲ್ಡನ್ ಅವರ್ ಒಳಗೆ 1930 ಗೆ ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ,ಇತ್ಯಾದಿ ವಿವರಗಳನ್ನು ನೀಡಿದರೆ ನೀವು ಕಳೆದುಕೊಂಡ ಹಣ ಸೇಫ್ ಆಗಲಿದೆ.

Leave a Reply

Your email address will not be published. Required fields are marked *