ಕಾರ್ಕಳ: ಬೈಲೂರಿನ ಪರಶುರಾಮ ಥೀಮ್ ಪಾರ್ಕಿನ ಪ್ರತಿಮೆಯ ನೈಜತೆ ವಿಚಾರದಲ್ಲಿ ಕಳೆದ ಹಲವು ತಿಂಗಳಿನಿAದ ಬಿಜೆಪಿ ಕಾಂಗ್ರೆಸ್ ನಡುವೆನ ನಡೆಯುತ್ತಿರುವ ಮಾತಿನ ಕದನವು ಇದೀಗ ಇನ್ನೊಂದು ತಿರುವು ಪಡೆದಿದ್ದು, ಥೀಮ್ ಪಾರ್ಕಿನ ಕಾಮಗಾರಿ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಗಳ ನಿರ್ಬಂಧದ ನಡುವೆ ಅಕ್ರಮ ಪ್ರವೇಶ ಮಾಡಿ ಪರಶುರಾಮನ ಪ್ರತಿಮೆಗೆ ಹಾನಿ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಥೀಮ್ ಪಾರ್ಕಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದರೂ ಬಿಜೆಪಿಯ ಕಾರ್ಯಕರ್ತರಾದ ಸುಹಾಸ್ ಶೆಟ್ಟಿ,ಮಹಾವೀರ ಹೆಗ್ಡೆ, ಸುಮಿತ್ ಶೆಟ್ಟಿ, ವಿಖ್ಯಾತ್ , ಮುಸ್ತಾಫ,ರಾಕೇಶ್, ಸಮೃದ್ಧಿ ಪ್ರಕಾಶ್ ಶೆಟ್ಟಿ ಮತ್ತಿತರರು ಪರಶುರಾಮನ ಪ್ರತಿಮೆಯ ಭಾಗಕ್ಕೆ ಸುತ್ತಿಗೆಯಿಂದ ಹೊಡೆದು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯನ್ನುಂಟು ಮಾಡಿದ್ದಾರೆ ಎಂದು ದಿವ್ಯಾ ನಾಯಕ್ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ
ಈ ದೂರಿಗೆ ಪ್ರತಿಯಾಗಿ ಬಿಜೆಪಿ ಕೂಡ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರತಿದೂರು ನೀಡಿದ್ದು, ಎರ್ಲಪಾಡಿ ಗ್ರಾಮದ ಉಮ್ಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಪರಶುರಾಮನ ವಿಗ್ರಹದ ಮುಂದುವರಿದ ಕಾಮಗಾರಿಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧವನ್ನು ಉಲ್ಲಂಘಿಸಿ ಕಾಂಗ್ರೆಸ್ ಕಾರ್ಯಕರ್ತರಾದ ಶುಭದ ರಾವ್, ದೀಕ್ಷಿತ್, ದೀಪಕ್, ವಿವೇಕಾನಂದ, ಯೋಗೀಶ್ ಆಚಾರ್ಯ, ಸೂರಜ್, ಪ್ರದೀಪ್, ಅಲ್ಬಾಝ್, ಐವಾನ್, ದಿವ್ಯಾ, ಕೃಷ್ಣ, ಹರೀಶ್ ಮುಂತಾದವರು ಏಕಾಎಕಿ ಪರಶುರಾಮನ ವಿಗ್ರಹದ ಬಳಿ ತೆರಳಿ ವಿಗ್ರಹಕ್ಕೆ ಹೊದಿಸಲಾಗಿದ್ದ ರಕ್ಷಣಾ ಕವಚ ಹರಿದುಹಾಕಿ ಕಂಚಿನ ಮೂರ್ತಿಯ ಮೇಲಿದ್ದ ಫಿನಿಶಿಂಗ್ ಲೇಪನ ಹರಿದುಹಾಕಿ ಮೂರ್ತಿಯನ್ನು ವಿರೂಪಗೊಳಿಸಿ ಸರ್ಕಾರಕ್ಕೆ ನಷ್ಟವುಂಟು ಮಾಡಿರುವುದಲ್ಲದೇ ಮೂರ್ತಿಯ ವಿಚಾರದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಕುರಿತಂತೆ ಉಭಯ ಪಕ್ಷಗಳ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಾಗಿದೆ.
ಒಟ್ಟಿನಲ್ಲಿ ತುಳುನಾಡಿನ ಸೃಷ್ಟಿಕರ್ತ ಎಂದು ಪುರಾಣದಲ್ಲಿ ಉಲ್ಲೇಖವಾಗಿರುವ ಪರಶುರಾಮ ಮಾತ್ರ ಇದೀಗ ವಿವಾದದ ಕೇಂದ್ರಬಿAದುವಾಗಿದ್ದು, ರಾಜಕೀಯ ಪಕ್ಷಗಳ ಪರಸ್ಪರ ಕಿತ್ತಾಟಕ್ಕೂ ಕಾರಣವಾಗಿದ್ದು ಮಾತ್ರವಲ್ಲದೇ ವೈಯುಕ್ತಿಕ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗಿದೆ. ರಾಜಕೀಯ ಪಕ್ಷಗಳ ಡೊಂಬರಾಟದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವೃ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಎಲ್ಲದರ ನಡುವೆ ಈ ಪ್ರಕರಣ ಇನ್ಯಾವ ತಿರುವು ಪಡೆಯುತ್ತದೆಯೋ ಕಾದುನೋಡಬೇಕಿದೆ




