ಮಂಗಳೂರು:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು, ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗೆ ಅಲ್ಲಿನ ಮತದಾರರಿಗೆ ಅಭಿನಂದನೆಗಳು ಹಾಗೂ ಇತರೇ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಿದ ಪ್ರತಿಯೊಬ್ಬ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಚುನಾವಣಾ ವ್ಯವಸ್ಥೆಯಲ್ಲಿ ಸೋಲು-ಗೆಲವು ಸಹಜ, ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ಕಾಂಗ್ರೆಸ್ ನಿರಂತರವಾಗಿ ಜನರ ಜತೆಗಿದ್ದು ರಾಜಕಾರಣ ಮಾಡಿದೆ.
ಕರ್ನಾಟಕ ರಾಜ್ಯದಲ್ಲಿ ಬಡವರ್ಗದ ಹಾಗೂ ದಲಿತರ ಪರವಾಗಿ ಆಶ್ವಾಸನೆ ನೀಡಿದ ಗ್ಯಾರಂಟಿಗಳನ್ನು ಚುನಾವಣೆಯಲ್ಲಿ ಗೆದ್ದ 100 ದಿನಗಳಲ್ಲಿ ಅನುಷ್ಟಾನಕ್ಕೆ ತಂದಿರುವುದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿಯುವ ಸಾಧನೆಯಾಗಿದೆ.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಕಾಪಿ ಮಾಡಿದ ಬಿಜೆಪಿ ಮದ್ಯ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ನಮ್ಮ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹೆಸರನ್ನು ಬದಲಾಯಿಸಿದವರೇ ಲಾಡ್ಲಿ ಬೆಹ್ನಾ ಹೆಸರಿನಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಗೆಲುವು ದಾಖಲಿಸಲೆಂಬ ಎಕಮಾತೃ ದೃಷ್ಟಿಯಿಂದ ನಮ್ಮ ಗ್ಯಾರಂಟಿಗಳ ಹೆಸರು ಬದಲಾಯಿಸುವಷ್ಟು ಮಟ್ಟಕ್ಕೆ ಕರ್ನಾಟಕ ಕಾಂಗ್ರೆಸ್ ನ ಗ್ಯಾರಂಟಿಗಳು ಕಾರಣವಾಗಿದೆ.
ಕರ್ನಾಟಕ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ನಿದ್ದಿಗೆಡಿಸಿದ್ದು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎಂದು ಟೀಕೆ ಮಾಡಿದ ಬಿಜೆಪಿ ಈಗ ಸ್ವತಃ ಮೋದಿ ಕೀ ಗ್ಯಾರಂಟಿ ಎನ್ನುವ ಹೆಸರಿನಲ್ಲಿ ನಮ್ಮ ಯೋಜನೆಗಳನ್ನು ಹೆಸರು ಬದಲಾವಣೆ ಮಾಡಿ ಚುನಾವಣೆಯಲ್ಲಿ ಪ್ರಯೋಗ ಮಾಡಿರುವುದು ಜಗಜ್ಜಾಹಿರಾಗಿದೆ. ಇನ್ನು ಮುಂದೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಯಾವುದೇ ನೈತಿಕತೆಯನ್ನು ಬಿಜೆಪಿ ಹೊಂದಿಲ್ಲ.
ಅದೇನೆ ಇರಲಿ ನಮ್ಮ ಪಕ್ಷದ ಸೋಲಿನ ಬಗ್ಗೆ ಪರಾಮರ್ಶೆ ಮಾಡಿ ನಮ್ಮಲ್ಲಿನ ನೂನ್ಯತೆಗಳನ್ನು ತಿದ್ದಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಹಿರಿಯ ಹಾಗೂ ಕಿರಿಯ ನಾಯಕರುಗಳ ಒಗ್ಗಟ್ಟು ಹಾಗೂ ಕೊಟ್ಯಾಂತರ ಕಾರ್ಯಕರ್ತರ ಒಕ್ಕೊರಲ ಶ್ರಮದಿಂದ ಲೋಕಸಭಾ ಚುನಾವಣೆಯಲ್ಲಿ INDIA ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.