Share this news

ಜೈಪುರ:ತೀವೃ ಚರ್ಚೆಗೆ ಗ್ರಾಸವಾಗಿದ್ದ ರಾಜಸ್ಥಾನದ ಸಿಎಂ ಆಯ್ಕೆ ಗೊಂದಲ ಕೊನೆಗೂ ಬಗೆಹರಿದಿದೆ. ನೂತನ ಮುಖ್ಯಮಂತ್ರಿಯ ಹೆಸರನ್ನು ಹೈಕಮಾಂಡ್ ಪ್ರಕಟಿಸಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಜನ್ ಲಾಲ್ ಶರ್ಮಾ ಅವರ ಹೆಸರನ್ನು ಸರ್ವಾನುಮತದಿಂದ ಅಂಗೀಕರಿಸುವ ಮೂಲಕ ಸಿಎಂ ಸ್ಥಾನಕ್ಕೆ ಅಚ್ಚರಿಯ ಆಯ್ಕೆ ನಡೆದಿದೆ.

ಇದೇ ಮೊದಲ ಬಾರಿ ಶಾಸಕರಾಗಿರುವ ಭಜನ್ ಲಾಲ್ ಶರ್ಮಾ ಈ ಹಿಂದೆ 4 ಬಾರಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರಿಗೆ ಆರ್‌ಎಸ್‌ಎಸ್ ಮತ್ತು ಎಬಿವಿಪಿ ಜೊತೆ ನಂಟಿದೆ ಅಲ್ಲದೇ ಸಂಗನೇರ್ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು ಅಲ್ಲಿ ಭಜನ್ ಲಾಲ್ ಶರ್ಮಾ ಗೆದ್ದಿರುವ ಹಿನ್ನೆಲೆಯಲ್ಲಿ ಹಾಗೂ ಸಂಘಟನೆಯಲ್ಲಿ ಅವರ ಪ್ರಮುಖ ಪಾತ್ರವನ್ನು ಪರಿಗಣಿಸಿ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಬಹುದೊಡ್ಡ ಜವಾಬ್ದಾರಿ ನೀಡಲಾಗಿದೆ ಎನ್ನಲಾಗಿದೆ.

ರಾಜಸ್ಥಾನದಲ್ಲಿ ಎರಡು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ದಲಿತ ಸಮುದಾಯ ಪ್ರೇಮ್ ಚಂದ್ ಬೈರವಾ ಹಾಗೂ ರಜಪೂತ ಸಮುದಾಯದ ದಿಯಾ ಕುಮಾರಿ ಡಿಸಿಎಂ ಆಗಲಿದ್ದಾರೆ. ಇನ್ನು ಸ್ಪೀಕರ್ ಆಗಿ ವಾಸುದೇವ ದೇವನಾನಿ ಅವರನ್ನು ಆಯ್ಕೆ ಮಾಡಲಾಗಿದೆ.ಇದಕ್ಕೂ ಮುನ್ನ ಹೈಕಮಾಂಡ್ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸರೋಜ್ ಪಾಂಡೆ ಮತ್ತು ವಿನೋದ್ ತಾವ್ಡೆ ಅವರನ್ನು ವೀಕ್ಷಕರಾಗಿ ಜೈಪುರಕ್ಕೆ ಕಳುಹಿಸಿತ್ತು. ಈ ನಡುವೆ ಸಿಎಂ ಸ್ಥಾನಕ್ಕೆ ಬಿಗಿಪಟ್ಟು ಹಿಡಿದಿದ್ದ ಮಾಜಿ ಸಿಎಂ ವಸುಂಧರಾ ರಾಜೇ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಸುಧೀರ್ಘ ಮಾತುಕತೆಯ ಬಳಿಕ ತಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ ಎಂದು ರಾಜೇ ಹೇಳಿಕೆ ನೀಡಿದ್ದರು.
ಚುನಾವಣಾ ಗೆಲುವಿನ ನಂತರ ಪಕ್ಷದ ಹಲವು ಶಾಸಕರಿಗೆ ವಸುಂಧರಾ ಅವರು ಔತಣಕೂಟ ನೀಡಿದ್ದು,ಇದು ಅವರ ಬಲಪ್ರದರ್ಶನ ಎಂದೇ ಬಿಂಬಿಸಲಾಗಿತ್ತು. ಆದರೆ, ನಡ್ಡಾ ಅವರನ್ನು ಭೇಟಿಯಾದ ನಂತರ ವಸುಂಧರಾ ಅವರ ವರಸೆ ಬದಲಾಗಿದೆ. ತಾವು ಪಕ್ಷದ ಶಿಸ್ತಿನ ಕಾರ್ಯಕರ್ತೆ ಎಂದು ಬಣ್ಣಿಸಿದರು. ಈ ಹಿಂದೆ, ರಾಜಸ್ಥಾನದ ರಾಜಸಮಂದ್ ಸಂಸದೆ ದಿಯಾ ಕುಮಾರಿ, ಜೈಪುರ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್, ರಾಜ್ಯಸಭಾ ಸದಸ್ಯ ಕಿರೋರಿ ಲಾಲ್ ಮೀನಾ ಮತ್ತು ಅಲ್ವಾರ್ ಸಂಸದ ಬಾಬಾ ಬಾಲಕ್ ನಾಥ್ ಅವರು ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಪಕ್ಷ ವಸುಂಧರಾ ಅವರನ್ನು ಬಿಟ್ಟು ಬೇರೆಯವರಿಗೆ ಪಟ್ಟ ಕಟ್ಟಬಹುದು ಎಂಬ ಊಹಾಪೋಹಗಳು ಶುರುವಾಗಿತ್ತು.ಇದೀಗ ಬಿಜೆಪಿ ಹೈಕಮಾಂಡ್ ಸಿಎಂ ಸ್ಥಾನಕ್ಕೆ ಅಚ್ಚರಿಯ ಅಭ್ಯರ್ಥಿ ಆಯ್ಕೆಯ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ.

Leave a Reply

Your email address will not be published. Required fields are marked *