ಮಂಗಳೂರು:ಬೆಳಗಾವಿ ಸುವರ್ಣ ಸೌಧದಲ್ಲಿರುವ ಸಾವರ್ಕರ್ ಭಾವಚಿತ್ರ ತೆರವುಗೊಳಿಸುವ ವಿಚಾರವಾಗಿ ಸ್ಪೀಕರ್ ಯುಟಿ ಖಾದರ್ ಮೃದು ಧೋರಣೆಯ ಹೇಳಿಕೆ ನೀಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಖಾದರ್ವಿರುದ್ಧ ಪೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಎಸ್ಡಿಪಿಐ ಪಕ್ಷದ ಮುಖಂಡನನ್ನು ಮಂಗಳೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಎಸ್ಡಿಪಿಐ ಮುಖಂಡ ರಿಯಾಝ್ ಕಡಂಬು ಬಂಧಿತ ಆರೋಪಿಯಾಗಿದ್ದು, ಸೈಬರ್ ಕ್ರೈಂ ಪೊಲೀಸರು ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ತೆರವು ಮಾಡಬೇಕೆಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಸ್ಪೀಕರ್ ಖಾದರ್ ತನ್ನ ಅಭಿಪ್ರಾಯ ತಿಳಿಸಿದ್ದರು.ನನ್ನ ಕೆಲಸ ಜೋಡಿಸುವುದೇ ಹೊರತು ಕಿತ್ತು ಬಿಸಾಕುವುದಲ್ಲ ಎಂದು ಹೇಳುವ ಮೂಲಕ ವಿವಾದ ತಣ್ಣಗಾಗಿಸಿದ್ದರು. ಖಾದರ್ನೀಡಿದ್ದ ಈ ಹೇಳಿಕೆ ವಿರುದ್ಧ ಫೇಸ್ಟುಕ್ನಲ್ಲಿ ಎಸ್ ಡಿಪಿಐ ಮುಖಂಡ ರಿಯಾಜ್ ಕಡಂಬು ಕುಹಕ ಮಾಡಿ ಪೋಸ್ಟ್ ಹಾಕಿದ್ದರು. ಈ ಬಗ್ಗೆ ಕಾಂಗ್ರೆಸ್ ಪ್ರಮುಖರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.