ಅಲಿಗಢ; ಉತ್ತರ ಪ್ರದೇಶದ ಅಲಿಗಢದಲ್ಲಿ ಪೊಲೀಸ್ ಠಾಣೆಯೊಳಗೆ ಪೊಲೀಸರ ಕೈಯಲಿದ್ದ ರಿವಲ್ವಾರ್ ಮಿಸ್ ಫೈರ್ ಆಗಿ ಮಹಿಳೆ ತಲೆಗೆ ಗುಂಡು ತಗುಲಿರುವ ಪ್ರಕರಣದಲ್ಲಿ, ಇದೀಗ ಸಂತ್ರಸ್ತ ಮಹಿಳೆ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕಳೆದ ಶುಕ್ರವಾರ (ಡಿಸೆಂಬರ್ 8) ಮಧ್ಯಾಹ್ನ 2:50ಕ್ಕೆ ಈ ಘಟನೆ ನಡೆದಿದೆ. ಇಶ್ರತ್ ಜಹಾನ್ ಎಂಬ ಮಹಿಳೆ ತನ್ನ ಮಗನೊಂದಿಗೆ ಕೊತ್ವಾಲಿ ಪೊಲೀಸ್ ಠಾಣೆಗೆ ಹೋದಾಗ ಸ್ವಲ್ಪ ಹೊತ್ತು ನಿಂತಿದ್ದಳು. ಸ್ವಲ್ಪ ಸಮಯದ ನಂತರ, ಒಬ್ಬ ಪೊಲೀಸ್ ಅಧಿಕಾರಿ ಅಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಮನೋಜ್ ಶರ್ಮಾಗೆ ಪಿಸ್ತೂಲ್ ನೀಡಿದರು. ಎಸ್‌ಐ ಪಿಸ್ತೂಲ್ ಕ್ಲೀನ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಹಾರಿದ ಗುಂಡು ಮಹಿಳೆಗೆ ತಗುಲಿತ್ತು. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಗುರುವಾರ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.








