ಪುತ್ತೂರು ಡಿ.15: ಪುತ್ತೂರು ತಾಲೂಕಿನಲ್ಲಿ ಯುವ ವಿಜ್ಞಾನಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ನಿವಾಸಿ ಭರತ್ ಕಲ್ಲರ್ಪೆ (24) ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವ ವಿಜ್ಞಾನಿ. ಭರತ್ ಹೈದರಾಬಾದ್ನ ಡಿಆರ್ಡಿಒ ಸಂಸ್ಥೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ವಿಜ್ಞಾನಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಅವರು ಈ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಕಳೆದ ಒಂದು ವಾರದ ಹಿಂದೆ ಅವರು ಊರಿಗೆ ಆಗಮಿಸಿದ್ದರು. ಈ ನಡುವೆ ಸಂಸ್ಥೆಗೆ ರಾಜೀನಾಮೆ ಪತ್ರ ನೀಡಿದ್ದರೂ ರಾಜೀನಾಮೆ ಸ್ವೀಕಾರ ಮಾಡಿರಲಿಲ್ಲ ಎನ್ನಲಾಗಿದೆ. ಬುಧವಾರ ರಾತ್ರಿ ಇವರು ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಯ ಕಚೇರಿಯಿಂದ ಅವರಿಗೆ ಫೋನ್ ಕರೆ ಬಂದಿತ್ತು. ಆ ಬಳಿಕ ಮಲಗಿದ್ದ ಭರತ್ ಅವರು ತಡರಾತ್ರಿ ಈ ಕೃತ್ಯ ಎಸಗಿಕೊಂಡಿದ್ದಾರೆ. ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರು ತಂದೆ, ಸಹೋದರ ಪತ್ರಕರ್ತ ಗಣೇಶ್ ಕಲ್ಲರ್ಪೆ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ. ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








