Share this news
ಬೆಳಗಾವಿ (ಡಿ.16): ಸರ್ಕಾರಿ ನೌಕರರಿಗೆ ಇರುವ ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಯನ್ನು ಅನುದಾನಿತ ಶಾಲೆ, ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರಿಗೆ ವಿಸ್ತರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ನೌಕರರಿಗೆ 2015ರ ಜನವರಿಯಿಂದ ‘ಜ್ಯೋತಿ ಸಂಜೀವಿನಿ’ ಯೋಜನೆ ಜಾರಿಗೆ ತರಲಾಗಿದೆ. ಕ್ಯಾನ್ಸರ್‌, ಹೃದ್ರೋಗ ಸೇರಿದಂತೆ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಖರ್ಚಾದ ಹಣವನ್ನು ಸರ್ಕಾರ ಮರು ಪಾವತಿಸುತ್ತದೆ. ಈ ಯೋಜನೆಯನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರಿಗೂ ವಿಸ್ತರಿಸುವ ಬಗ್ಗೆ ಹಣಕಾಸು ಲಭ್ಯತೆ ನೋಡಿಕೊಂಡು ಪರಿಶೀಲಿಸಲಾಗುವುದು ಎಂದರು. ಇದಕ್ಕೂ ಮುನ್ನ ಸದಸ್ಯೆ ಹೇಮಲತಾ ಅವರ ಒತ್ತಾಯಕ್ಕೆ ದನಿಗೂಡಿಸಿದ ವೈ.ಎ ನಾರಾಯಣಸ್ವಾಮಿ, ಮರಿತಿಬ್ಬೇಗೌಡ ಮತ್ತಿತರರು ಅನುದಾನಿತ ಶಿಕ್ಷಕರು, ಉಪನ್ಯಾಸಕರಿಗೆ ಆಯುಷ್ಮಾನ್‌ ಆರೋಗ್ಯ ಕರ್ನಾಟಕ ಯೋಜನೆ ಸೇರಿದಂತೆ ಯಾವುದೇ ಆರೋಗ್ಯ ಯೋಜನೆ ಸಿಗದೇ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಅವರನ್ನು ಜ್ಯೋತಿ ಸಂಜೀವಿನಿ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕೆಂದು ಮನವಿ ಮಾಡಿದ್ದರು. ಈ ಕುರಿತು ಸರ್ಕಾರ ಪರಿಶೀಲನೆ ಮಾಡಲಿದೆ ಎಂದು ಸಿಎಂ ಭರವಸೆ ನೀಡಿದರು

Leave a Reply

Your email address will not be published. Required fields are marked *