Share this news

ಬೆಂಗಳೂರು: ಕಾರ್ಕಳ ತಾಲೂಕಿನ ಬೈಲೂರು ಸಮೀಪದ ಉಮಿಕ್ಕಲ್ ಬೆಟ್ಟದಲ್ಲಿ ಸುಮಾರು 14 ಕೋ.ರೂ ವೆಚ್ಚದಲ್ಲಿ ಸ್ಥಾಪಿಸಲಾದ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಕಳಪೆಯಾಗಿದೆ,ಮಾತ್ರವಲ್ಲದೇ ಭಾರೀ ಭ್ರಷ್ಟಾಚಾರ ನಡೆದಿದೆ ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅಡ್ಡಿಯಾಗಿದೆ ಎಂಬ ದೂರುಗಳು ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ತನಿಖೆ ನಡೆಸಲು ಕೋರಿ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆಯ ಕುರಿತು ಸಿಓಡಿ ತನಿಖೆಗೆ ಆದೇಶಿಸಿದ್ದಾರೆ.

ವಿಧಾನಸಭೆ ಚುನಾವಣೆಯ ಘೋಷಣೆಗೂ ಮುನ್ನ ಕಾರ್ಕಳ ಶಾಸಕ ಹಾಗೂ ಅಂದಿನ ಇಂಧನ ಸಚಿವರಾಗಿದ್ದ ಸುನಿಲ್ ಕುಮಾರ್ ತರಾತುರಿಯಲ್ಲಿ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದರು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಶುರಾಮ ಥೀಮ್ ಪಾರ್ಕನ್ನು ಉದ್ಘಾಟಿಸಿದ್ದರು. ಚುನಾವಣೆ ಮುಗಿದ ಬಳಿಕ ಜಿಲ್ಲಾಡಳಿತ ಪರಶುರಾಮ ಥೀಮ್ ಪಾರ್ಕಿನ ಬಾಕಿ ಉಳಿದ ಕಾಮಗಾರಿಯನ್ನು ಮುಕ್ತಾಯಗೊಳಿಸುವುದಾಗಿ ಸಾರ್ವಜನಿಕರ ಭೇಟಿಗೆ ನಿರ್ಬಂಧ ವಿಧಿಸಿತ್ತು. ಕಾಮಗಾರಿ ಆರಂಭಿಸಿದ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯು ಪರಶುರಾಮನ ಮೂರ್ತಿಯ ತಳಪಾಯ ಬಲಪಡಿಸಬೇಕೆಂದು ಪ್ರತಿಮೆಯ ಮೇಲ್ಭಾಗವನ್ನು ತೆರವುಗೊಳಿಸಿತ್ತು.ಆದರೆ ಜಿಲ್ಲಾಡಳಿತದ ಈ ನಿರ್ಧಾರದ ವಿರುದ್ಧ ಸ್ಥಳೀಯರು ಸೇರಿಕೊಂಡು ಪ್ರತಿಭಟನೆ ನಡೆಸಿದರು.ಪರಶುರಾಮನ ಪ್ರತಿಮೆ ನಕಲಿ ಆದ್ದರಿಂದ ಯಾವುದೇ ಕಾರಣಕ್ಕೂ ಪ್ರತಿಮೆ ಬದಲಿಸಲು ಅವಕಾಶ ನೀಡುವುದಿಲ್ಲ,ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ,ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಸಮಾನಮನಸ್ಕ ಸಂಘಟನೆಯ ಸದಸ್ಯರು ಹೋರಾಟ ನಡೆಸಿದ್ದರು, ಈ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತು.
ಈ ಪ್ರತಿಭಟನೆಯ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ಆರೋಪ ಪ್ರತ್ಯಾರೋಪ ತಾರಕಕ್ಕೆ ಏರಿತ್ತು‌ ಈ ಮೂರ್ತಿಯ ಅಸಲಿಯತ್ತನ್ನು ಸಾಬೀತುಪಡಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಶುರಾಮ ಮೂರ್ತಿಗೆ ಬಡಿದು ಪರಿಶೀಲಿಸಿದ್ದರು.ಆದರೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯನ್ನುಂಟು ಮಾಡಿದ್ದಾರೆ ಎಂದು ಉಭಯ ಪಕ್ಷಗಳ ಕಾರ್ಯಕರ್ತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಇತ್ತ ಸಿಓಡಿ ತನಿಖೆಗೆ ಸಿಎಂ ಆದೇಶ ನೀಡಿದ್ದು ಇದರಿಂದ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.ಅಲ್ಲದೇ ಈ ಪ್ರಕರಣವು ಸುನಿಲ್ ಕುಮಾರ್ ಅವರಿಗೆ ಕಂಟಕವಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

 

 

 

 

 

 
 

 

 
 

 

Leave a Reply

Your email address will not be published. Required fields are marked *