ಕಾರವಾರ:ಸಿಎಂ ಸಿದ್ದರಾಮಯ್ಯ ಅವರನ್ನು ಏಕವಚನದಿಂದ ಸಂಬೋಧಿಸಿ ಅಪಮಾನಕರವಾಗಿ ನಿಂದಿಸಿದ್ದಾರೆ ಎಂಬ ಆರೋಪದಲ್ಲಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಮುಂಡಗೋಡ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಂಡಗೋಡ ಠಾಣಾ ವ್ಯಾಪ್ತಿಯ ಪಾಳಾ ಎಂಬಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದಿದ್ದರು.ಅಲ್ಲದೆ ದೆಹಲಿಯಲ್ಲಿ ಖಲಿಸ್ತಾನಿ ಉಗ್ರರು ರೈತರ ಸೋಗಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಸಿಎಂ ಗೆ ಅವಮಾನಿಸಿದ್ದು ಮಾತ್ರವಲ್ಲದೇ ಧಾರ್ಮಿಕ, ಸಾಮಾಜಿಕವಾಗಿ ಅಪಮಾನಕರ ಮಾತುಗಳನ್ನಾಡಿರುವ ಹಿನ್ನೆಲೆಯಲ್ಲಿ ಸಂಸದರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ . ಈ ಹಿಂದೆ ಕುಮಟಾದಲ್ಲಿ ನಡೆದಿದ್ದ ಸಭೆಯಲ್ಲಿಯೂ ಅನಂತಕುಮಾರ ಅವರ ಪ್ರಚೋದನಕಾರಿ ಮಾತುಗಳಿಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ರಾಜಕೀಯ ಪ್ರೇರಿತ : ಬಿಜೆಪಿ ಆರೋಪ ಸಂಸದ ಅನಂತಕುಮಾರ್ ಹೆಗಡೆ ಮಾಡಿರುವ ಭಾಷಣದ ಕುರಿತು ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಪೊಲೀಸರಿಗೆ ಸರ್ಕಾರದ ಮೇಲೆ ಒತ್ತಡವಿದೆ ಎಂದು ಬಿಜೆಪಿ ಆರೋಪಿಸಿದೆ.ದೇವಸ್ಥಾನದ ಹುಂಡಿಗೂ ಕೈ ಹಾಕಿದ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಕುಟುಕಿದೆ.