ಕಾರ್ಕಳ: ಕೃಷಿಕರೊಬ್ಬರು ಕಷ್ಟಪಟ್ಟು ಬೆಳೆದ ಅಡಿಕೆಯನ್ನು ಬೆಳ್ತಂಗಡಿಯ ವರ್ತಕರೊಬ್ಬರಿಗೆ ಮಾರಾಟ ಮಾಡಿದ್ದು, ರೈತನಿಂದ ಖರೀದಿಸಿದ್ದ ಅಡಿಕೆಯ ಹಣವನ್ನು ಪಾವತಿಸದೇ ವಂಚಿಸಿದ ಪ್ರಕರಣ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಎಳ್ಳಾರೆ ಎಂಬಲ್ಲಿ ನಡೆದಿದೆ.
ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳ್ಳಾರೆ ಗ್ರಾಮದ ಡಾ. ರಾಮಕೃಷ್ಣ ಎಂಬವರ ಸುಮಾರು 15 ಕ್ವಿಂಟಾಲ್ ಅಡಿಕೆಯನ್ನು ಫೆ.3 ರಂದು ಬೆಳ್ತಂಗಡಿಯ ಅಡಿಕೆ ವ್ಯಾಪಾರಿ ಮೊಹಮ್ಮದ್ ಶರೀಫ್ ಎಂಬಾತ ಖರೀದಿಸಿದ್ದ. ತಾನು ಖರೀದಿ ಮಾಡಿದ್ದ ಅಡಿಕೆಯ ಮೊತ್ತ 7 ಲಕ್ಷ ಹಣವನ್ನು ಡಾ.ರಾಮಕೃಷ್ಣ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಹೇಳಿದ್ದ. ಆದರೆ ಮೊಹಮ್ಮದ್ ಶರೀಫ್ ಅಡಿಕೆ ಖರೀದಿಸಿದ ಬಳಿಕ ಹಣ ಹಾಕದೇ ವಂಚಿಸಿದ್ದಾನೆ. ಅಡಿಕೆಯ ಹಣವನ್ನು ಪಾವತಿಸುವಂತೆ ಶರೀಫ್ ಮೊಬೈಲಿಗೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸದೇ ವಂಚಿಸಿದ್ದಾನೆ ಎಂದು ಡಾ.ರಾಮಕೃಷ್ಣ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.