ರಾಂಚಿ : ಪ್ರಧಾನಿ ಮೋದಿಯವರ ವಿರುದ್ಧ ಜಾರ್ಖಂಡ್ ನ ಆರ್’ಜೆಡಿ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದು ಎಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮೋದಿಯವರ ತಲೆಗೆ ಗುಂಡು ಹಾರಿಸಬೇಕು ಎಂದು ಜಾರ್ಖಂಡ್ ಆರ್’ಜೆಡಿ ನಾಯಕ ಅವಧೇಶ ಸಿಂಗ್ ಯಾದವ್ ಪ್ರಚಾರ ಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಾರ್ಖಂಡ್ ನ ಕೊಡೆರ್ಮಾದಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಆರ್’ಜೆಡಿ ನಾಯಕ ಅವಧೇಶ್ ಸಿಂಗ್ ಯಾದವ್ ಅವರ ವೀಡಿಯೊ ವೈರಲ್ ಆಗಿದ್ದು, ಈ ವೀಡಿಯೊದಲ್ಲಿ ಪ್ರಧಾನಿ ಮೋದಿಯವರ ತಲೆಬುರುಡೆಗೆ ಗುಂಡು ಹಾರಿಸುವ ಬಗ್ಗೆ ಅವಧೇಶ್ ಮಾತನಾಡುತ್ತಿರುವುದು ಕೇಳಿಸುತ್ತದೆ. ಈ ವಿವಾದಾತ್ಮಕ ಹೇಳಿಕೆಯ ವಿಡಿಯೋವನ್ನು ಜಾರ್ಖಂಡ್ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಮಾಜಿ ಸಿಎಂ ಬಾಬುಲಾಲ್ ಮರಾಂಡಿ ಹಂಚಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಮರಾಂಡಿ, ಇಂಡಿಯಾ ಮೈತ್ರಿಕೂಟದ ಸೋಲು ಸಮೀಪಿಸುತ್ತಿರುವುದನ್ನು ನೋಡಿ, ಮೈತ್ರಿಕೂಟದ ಎಲ್ಲಾ ಪಕ್ಷಗಳು ಮತ್ತು ಅವರ ನಾಯಕರು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ. ಇಂಡಿಯಾ ಮೈತ್ರಿಕೂಟ ಏನೇ ಪಿತೂರಿ ನಡೆಸಿದರೂ ಮೋದಿಯವರ 140 ಕೋಟಿ ಕುಟುಂಬ ಅವರೊಂದಿಗೆ ನಿಂತಿದೆ. ಚುನಾವಣಾ ಆಯೋಗ ಮತ್ತು ಜಾರ್ಖಂಡ್ ಪೊಲೀಸರು ಅವಧೇಶ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.