ನವದೆಹಲಿ: ಗಾಂಧಿ ಕುಟುಂಬದ ಭದ್ರಕೋಟೆ ಎಂದೇ ಕರೆಯಲಾಗುವ ರಾಯಬರೇಲಿಯಿಂದ ಸಂಸದ ರಾಹುಲ್ ಗಾಂಧಿ ಸ್ಪರ್ಧಿಸಲಿದ್ದು, ಹಿರಿಯ ನಾಯಕ ಕೆಎಲ್ ಶರ್ಮಾ ಅಮೇಥಿಯಿಂದ ಕಣಕ್ಕಿಳಿಯಲಿದ್ದಾರೆ. ಪ್ರತಿಷ್ಠಿತ ಸ್ಥಾನಗಳಿಗೆ ನಾಮಪತ್ರ ಸಲ್ಲಿಸುವ ಕೆಲವೇ ಗಂಟೆಗಳ ಮೊದಲು ಅಭ್ಯರ್ಥಿಗಳ ಘೋಷಣೆಯಾಗಿದೆ.
ಲೋಕಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಹೊಸ ತಂತ್ರಗಾರಿಕೆಯನ್ನು ನಡೆಸಿದೆ. ಲೋಕಸಭಾ ಚುನಾವಣೆಯಲ್ಲಿ ಈಗಾಗಲೇ ವಯನಾಡಿನಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ರಾಯ್ಬರೇಲಿಯಿಂದಲೂ ಕಣಕ್ಕಿಳಿದಿದ್ದಾರೆ.
ನಾಮಪತ್ರ ಸಲ್ಲಿಸುವ ಗಡುವು ಇಂದು ಮಧ್ಯಾಹ್ನ 3 ಗಂಟೆಗೆ ಕೊನೆಗೊಳ್ಳಲಿದೆ. ಎರಡೂ ಸ್ಥಾನಗಳನ್ನು ಗಾಂಧಿ-ನೆಹರೂ ಕುಟುಂಬದ ಸಾಂಪ್ರದಾಯಿಕ ಭದ್ರಕೋಟೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಗಾಂಧಿ ಕುಟುಂಬಸ್ಥರು ಹಲವಾರು ದಶಕಗಳಿಂದ ಈ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದಾರೆ. ರಾಯ್ ಬರೇಲಿಯಲ್ಲಿ ಮೇ 20ರಂದು ಮತದಾನ ನಡೆಯಲಿದೆ. ಇನ್ನೂ ಇಷ್ಟು ದಿನಗಳ ಕಾಲ ಸಾಕಷ್ಟು ಕುತೂಹಲ ಮೂಡಿಸಿದ್ದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ವಿಚಾರಕ್ಕೆ ಇಂದು ತೆರೆ ಬಿದಿದ್ದು, ಪ್ರಿಯಾಂಕಾ ಗಾಂಧಿ ಎಲ್ಲೂ ಸ್ಪರ್ಧಿಸುತ್ತಿಲ್ಲ ಎಂಬುದು ತಿಳಿದುಬಂದಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ರಾಯ್ ಬರೇಲಿಯಿಂದ ಚುನಾವಣಾ ಕಣಕ್ಕೆ ಪಾದಾರ್ಪಣೆ ಮಾಡಬಹುದೆಂದು ಊಹಿಸಲಾಗಿತ್ತು. ಆದರೆ, ಪ್ರಿಯಾಂಕಾ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಈ ಮೊದಲು ರಾಹುಲ್ ಗಾಂಧಿ ಅಮೇಠಿಯಿಂದ ಮತ್ತು ಪ್ರಿಯಾಂಕಾ ರಾಯ್ಬರೇಲಿಯಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿತ್ತು.
ರಾಯ್ ಬರೇಲಿ ಸಂಸದರಾಗಿ ಸತತ ನಾಲ್ಕು ಬಾರಿ ಸೇವೆ ಸಲ್ಲಿಸಿದ ನಂತರ, ಮಾಜಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ರಾಯ್ಬರೇಲಿ ಕ್ಷೇತ್ರವು ಕಾಂಗ್ರೆಸ್ಗೆ ಪ್ರತಿಷ್ಠಿತ ಕ್ಷೇತ್ರವಾಗಿದೆ ಏಕೆಂದರೆ ಇದನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮೂರು ಬಾರಿ ಮತ್ತು ಇಂದಿರಾ ಅವರ ಪತಿ ಫಿರೋಜ್ ಗಾಂಧಿಯವರು 1952 ಮತ್ತು 1957 ರಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಸೋನಿಯಾ ಗಾಂಧಿ 2004 ರಿಂದ 2024 ರವರೆಗೆ ಪ್ರತಿನಿಧಿಸಿದ್ದರು.
ರಾಹುಲ್ ಗಾಂಧಿಯವರು 2004 ರಿಂದ 2019 ರವರೆಗೆ ಮೂರು ಬಾರಿ ಅಮೇಥಿಯನ್ನು ಪ್ರತಿನಿಧಿಸಿದ್ದರು ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಂಧಿಯವರನ್ನು 50 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ಇರಾನಿ ವಿರುದ್ಧ ಗಾಂಧಿ ಕುಟುಂಬದ ಆಪ್ತ ಕೆಎಲ್ ಶರ್ಮಾ ಕಣಕ್ಕಿಳಿದಿದ್ದಾರೆ. ಮೇ 20 ರಂದು ಐದನೇ ಹಂತದಲ್ಲಿ ಅಮೇಥಿ ಮತ್ತು ರಾಯ್ ಬರೇಲಿ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದೆ.