ಕಾರ್ಕಳ: ಕಣಂಜಾರು ಶ್ರೀ ಬ್ರಹ್ಮಲಿಂಗೇಶ್ವರ ಹಾಗೂ ಸಪರಿವಾರ ವೀರಭದ್ರ ದೇವಸ್ಥಾನದ ಬ್ರಹ್ಮಕಲಶೋತ್ಸವವು ತಂತ್ರಿಗಳ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಏ.28ರಿಂದ ಮೇ 08 ರವರೆಗೆ ನಡೆಯುತ್ತಿದ್ದು, ಈ ಪ್ರಯುಕ್ತ ಶನಿವಾರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ದೇವಳದ ತಂತ್ರಿಗಳಾದ ಷಡಂಗ ಲಕ್ಷ್ಮೀನಾರಾಯಣ ತಂತ್ರಿ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಜೀರ್ಣೋದ್ಧಾರದಿಂದ ಗ್ರಾಮ ಸುಭೀಕ್ಷವಾಗುತ್ತದೆ.ದೇವಸ್ಥಾನಗಳಿಂದ ನಮ್ಮ ಧರ್ಮ ಸಂಸ್ಕೃತಿಗಳು ಉಳಿಯುತ್ತವೆ.ಕೋಟ್ಯಾಂತರ ರೂ ಖರ್ಚು ಮಾಡಿ ದೇವಸ್ಥಾನಗಳನ್ನು ಕಟ್ಟುವುದು ದೊಡ್ಡ ಕೆಲಸವಲ್ಲ,ಭಜಕರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಿಯಿಂದ ದೇವರನ್ನು ಭಜಿಸಿದಾಗ ಜತೆಗೆ ನಿತ್ಯಪೂಜೆಯಿಂದ ಕ್ಷೇತ್ರದ ಸಾನಿಧ್ಯವೃದ್ಧಿಯಾಗುತ್ತದೆ ಮಾತ್ರವಲ್ಲದೇ ಗ್ರಾಮಕ್ಕೆ ದೇವರ ಅಭಯ ಪ್ರಾಪ್ತಿಯಾಗುತ್ತದೆ ಎಂದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ವಿಕ್ರಮ್ ಹೆಗ್ಡೆ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, 105 ದಿನಗಳ ಒಳಗಾಗಿ ಈ ದೇವಸ್ಥಾನ ನಿರ್ಮಾಣವಾಗಿ ಇಂದು ಬ್ರಹ್ಮಕಲಶೋತ್ಸವ ನಡೆದಿರುವುದು ಬ್ರಹ್ಮಲಿಂಗೇಶ್ವರನ ಪವಾಡ, ನಾನು ಕೇವಲ ನಿಮಿತ್ತ ಮಾತ್ರ, ದೇವರ ಪ್ರೇರಣೆ ಹಾಗೂ ಗ್ರಾಮಸ್ಥರ ಸಹಕಾರದಿಂದ ಬ್ರಹ್ಮಕಲಶೋತ್ಸವ ಅತ್ಯಂತ ಸಂಭ್ರಮದಿಂದ ನಡೆಯಿತು ಎಂದು ಭಾವ ಪರವಶರಾಗಿ ನುಡಿದರು. ಬ್ರಹ್ಮಲಿಂಗೇಶ್ವರನ ಅನುಗ್ರಹದಿಂದ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಮುಷ್ಠಿಕಾಣಿಕೆ ತದನಂತರದ ಶಿಲಾನ್ಯಾಸದಿಂದ ಹಿಡಿದು ಬ್ರಹ್ಮಕಲಶೋತ್ಸವದ ವರೆಗೂ ದೇವಳದ ನಿರ್ಮಾಣ ಕಾರ್ಯವು ನಿರ್ವಿಘ್ನವಾಗಿ ನೆರವೇರಿದೆ.ದೇವಳದ ಜೀರ್ಣೋದ್ಧಾರಕ್ಕೆ ಮುಂಬಯಿ,ಪುಣೆಯ ದಾನಿಗಳ ನೆರವನ್ನು ಸ್ಮರಿಸಿದ ಅವರು, ಗ್ರಾಮಸ್ಥರು ಹಾಗೂ ಮಾಗಣೆಗಳ ಭಕ್ತಾಧಿಗಳು ಪ್ರತಿನಿತ್ಯ ಕರ ಸೇವಕರಾಗಿ ಸಮರ್ಪಣಾ ಮನೋಭಾವದಿಂದ ಶ್ರಮದಾನ ಮಾಡಿರುವುದು ಇದು ಬ್ರಹ್ಮಲಿಂಗೇಶ್ವರನ ಪವಾಡವೇ ಆಗಿದೆ ಎಂದರು.ಗ್ರಾಮಸ್ಥರ ಹಾಗೂ ಹಿರಿಯರ ಸಹಕಾರದಿಂದ ಜೀರ್ಣೋದ್ಧಾರ ಕಾರ್ಯದ ಅಧ್ಯಕ್ಷರಾಗಿ ಬ್ರಹ್ಮಲಿಂಗೇಶ್ವರನ ಸೇವೆ ಸಲ್ಲಿಸುವ ಅವಕಾಶ ನನಗೆ ಸಿಕ್ಕಿದ ಸೌಭಾಗ್ಯವಾಗಿದೆ ಎಂದರು.
ಈ ಸಂರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವೆಂಕಪ್ಪ ಹೆಗ್ಡೆ, ಎನ್.ಬಿ ಶೆಟ್ಟಿ ಮುಂಬಯಿ,ಚಲನಚಿತ್ರ ನಟ ಹಾಗೂ ನಿರ್ಮಾಪಕ ಗುರುಪ್ರಸಾದ್ ಹೆಗ್ಡೆ, ನ್ಯಾಯವಾದಿ ಬಿ.ಎನ್ ಪೂಜಾರಿ ಮುಂಬಯಿ,ಅಡಪಾಡಿ ದೇವಸ್ಥಾನದ ಧರ್ಮದರ್ಶಿ ಪುಂಡಲೀಕ ನಾಯಕ್,ಮಟ್ಟಾರು ರತ್ನಾಕರ ಹೆಗ್ಡೆ, ಷಡಂಗ ಲಕ್ಷ್ಮೀನಾರಾಯಣ ತಂತ್ರಿ,ದೇವಳದ ಪ್ರಧಾನ ಅರ್ಚಕ ಗುರುರಾಜ್ ಮಂಜಿತ್ತಾಯ, ಆಡಳಿತ ಮೊಕ್ತೇಸರರಾದ ಸುಧೀರ್ ಹೆಗ್ಡೆ,ಮುಂಬಯಿ ಉದ್ಯಮಿ ಸೀತಾರಾಮ ಶೆಟ್ಟಿ,ಮುಂಬಯಿ ಮಹಿಷಮರ್ದಿನಿ ದೇವಳದ ಧರ್ಮದರ್ಶಿ ಪ್ರದೀಪ್ ಶೆಟ್ಟಿ ಕೊಳಕೆಬೈಲು, ಮುಂಬಯಿ ಹೊಟೇಲ್ ಉದ್ಯಮಿ ಜಿತೇಂದ್ರ ಶೆಟ್ಟಿ,ಉದ್ಯಮಿ ಗಣೇಶ್ ಹೆಗ್ಡೆ ಪುಣೆ, ಸತೀಶ್ ಪೂಜಾರಿ ಪೆಲತ್ತೂರು ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಧನ ಸಹಾಯ ನೀಡಿದ ದಾನಿಗಳನ್ನು ಹಾಗೂ ದೇವಳದ ಕಾಮಗಾರಿ ನಿರ್ವಹಿಸಿದ ಶ್ರಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿವಪ್ರಸಾದ್ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಸಾದ್ ರಾವ್ ವಂದಿಸಿದರು.
