Share this news

ಹಾವೇರಿ: ಸ್ವಾತಂತ್ರ್ಯ ಹೋರಾಟದಲ್ಲಿ ದಲಿತರ ಪಾತ್ರ ಬಹಳ ದೊಡ್ಡದಿದೆ. ಯಾವಾಗ ದಲಿತರು ಹಿಂದುಳಿದವರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರೋ ಬ್ರಿಟೀಷರು ತಮಗೆ ಉಳಿಗಾಲವಿಲ್ಲ ಎಂದು ತೀರ್ಮಾನಿಸಿದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಭಾನುವಾರ ಹಾವೇರಿಯಲ್ಲಿ ಛಲವಾದಿ ಸಮುದಾಯದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮೊದಲಿನಿಂದಲೂ ಅವಮಾನ ಮಾಡುತ್ತಲೇ ಬಂದಿದೆ. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಮಹಾತ್ಮಾ ಗಾಂಧಿಜಿ ಪಕ್ಕ ಅಂಬೇಡ್ಕರ್ ಇರಬಾರದು ಅಂತ ಅವರ ಅಂತ್ಯ ಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡದೇ ಅವಮಾನ ಮಾಡಿದವರು ಕಾಂಗ್ರೆಸ್ ನವರು, ದಲಿತರಿಗೆ ಅನ್ಯಾಯ ಮಾಡಿದವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ 90 ರ ದಶಕದವರೆಗೂ ಭಾರತ ರತ್ನ ಕೊಟ್ಟಿರಲಿಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧಿಗೆ ಭಾರತ ರತ್ನ ಕೊಟ್ಟದ್ದರು. ಆದರೆ, ಅಂಬೇಡ್ಕರ್ ಅವರಿಗೆ ಕೊಟ್ಟಿರಲಿಲ್ಲ. ವಿ.ಪಿ. ಸಿಂಗ್ ಸರ್ಕಾರ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತ ರತ್ನ ಕೊಟ್ಟಿತು. ಅಂಬೇಡ್ಕರ್ ಅವರ ಚುನಾವಣೆಗೆ ಬೆಂಬಲ ಕೊಟ್ಟಿದ್ದು, ಅಂದಿನ ಜನಸಂಘ, ಇವರು ಈಗ ಮೀಸಲಾತಿ ರದ್ದಾಗುತ್ತದೆ ಎಂದು ಹೇಳುತ್ತಾರೆ. ಐವತ್ತು ವರ್ಷ ದಲಿತರ ಅಭಿವೃದ್ಧಿ ಮಾಡಬಹುದಿತ್ತು. ನಿಮ್ಮ ಮತಗಳು ಕೈ ತಪ್ಪುತ್ತವೆ ಎನ್ನುವ ಕಾರಣಕ್ಕೆ‌ ಮೀಸಲಾತಿ ರದ್ದಾಗುತ್ತದೆ ಎಂಬ ಆರೋಪ ಮಾಡುತ್ತಾರೆ ಎಂದರು.

ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಮೂವತ್ತು ವರ್ಷಗಳಿಂದ ಬೇಡಿಕೆ ಇತ್ತು. ಯಾರೂ ಮಾಡಿರಲಿಲ್ಲ. ನಾನು ಎಸ್ಸಿಗೆ 15 ರಿಂದ 17% ಎಸ್ಟಿ ಸಮುದಾಯಕ್ಕೆ ಶೇ 3% ರಿಂದ ಶೇ 7% ಕ್ಕೆ ಹೆಚ್ಚಳ ಮಾಡಿದ್ದೆ, ಇದರಿಂದ ಆ ಸಮುದಾಯದ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ಹೆಚ್ಚಿನ ಸೀಟುಗಳು ಸಿಗುತ್ತಿವೆ ಎಂದರು.

 

 

 

 

                        

                          

Leave a Reply

Your email address will not be published. Required fields are marked *