ಕಾರ್ಕಳ:ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಗುಣಮಟ್ಟ ಶಿಕ್ಷಣ ನೀಡುವಲ್ಲಿ ಬೇಕಾದ ವ್ಯವಸ್ಥೆ ಕಲ್ಪಿಸುವಲ್ಲಿ ಎಲ್ಲಾ ಸರ್ಕಾರಗಳು ಬದ್ದವಾಗಿವೆ. ಸರ್ಕಾರಿ ಶಾಲೆಗಳು ಎನ್ನುವ ಕೀಳರಿಮೆ ಬಿಟ್ಟು ಸರ್ಕಾರಿ ಶಾಲೆಯಲ್ಲಿ ಕಲಿತು ಸಾಧನೆಗೈದವರು ಸಾಕಷ್ಟು ಜನ ಇದ್ದಾರೆ.ಇಂತಹ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸುವ ಉದಾರ ದಾನಿಗಳ ಪಾತ್ರ ಮಹತ್ತರವಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳ ಎಸ್.ವಿ.ಟಿ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆದ ಬೋಳ ಸುರೇಂದ್ರ ಕಾಮತ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್, ಕಾರ್ಕಳ ಟೈಗರ್ಸ್ ಹಾಗೂ ಅಮ್ಮನ ನೆರವು ಚಾರಿಟಬಲ್ ಟ್ರಸ್ಟ್ ವತಿಯಿಂದ
ಕಾರ್ಕಳ ತಾಲೂಕಿನ 50 ಕನ್ನಡ ಮಾಧ್ಯಮ ಶಾಲೆಗಳ 2500 ಮಕ್ಕಳಿಗೆ ಉಚಿತ ಕೊಡೆ ಹಾಗೂ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ದಾನಿಗಳಾದ ದಾಮೋದರ ಕಾಮತ್ ತನ್ನ ಲಾಭದ ಒಂದಷ್ಟು ಅಂಶ ಸಮಾಜಕ್ಕೆ ಮೀಸಲು ಎಂಬಂತೆ ಒಟ್ಟು 22 ಲಕ್ಷ ಮೌಲ್ಯದ ಪಠ್ಯ ಪರಿಕರಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.
ಎಸ್ ವಿ.ಟಿ ಶಿಕ್ಷಣ ಸಂಸ್ಥೆಯ ಸಂಚಾಲಕ ಕೆ.ಪಿ ಶೆಣೈ ಮಾತನಾಡಿ,ಇಂದಿನ ವ್ಯವಸ್ಥೆಯಲ್ಲಿ ಶಿಕ್ಷಣ ಎನ್ನುವುದು ಭೌತಿಕ ಅಗತ್ಯತೆ ಮಾತ್ರ ಎನ್ನುವಂತಾಗಿದೆ,ಆದರೆ ಮಕ್ಕಳ ಭೌದ್ಧಿಕ ಮಟ್ಟದ ಸುಧಾರಣೆಯಲ್ಲಿ ವಿಫಲವಾಗಿದೆ.ಸರ್ಕಾರಗಳು ಉಚಿತ ಯೋಜನೆಗಳನ್ನು ಕೈಬಿಟ್ಟು ಗುಣಮಟ್ಟದ ಉಚಿತ ಶಿಕ್ಷಣ ನೀಡಿದರೆ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದರು. ಇದಲ್ಲದೇ 1ರಿಂದ 7ನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 8 ನೇ ತರಗತಿಗೆ ಎಸ್ ವಿಟಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದು ಕೆ.ಪಿ ಶೆಣೈ ಹೇಳಿದರು.
ಬೋಳ ಸುರೇಂದ್ರ ಕಾಮತ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಹಾಗೂ ಉದ್ಯಮಿ ಬೋಳ ದಾಮೋದರ್ ಕಾಮತ್ ಮಾತನಾಡಿ,ವಿದ್ಯೆಗೆ ವಿನಯವೇ ಭೂಷಣ, ತಂದೆಯವರ ಸ್ಮರಣಾರ್ಥವಾಗಿ ಬಡ ಮಕ್ಕಳಿಗೆ ಉಚಿತ ಪಠ್ಯ ಪರಿಕರ ನೀಡುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುವ ಜತೆಗೆ ಕನ್ನಡ ಮಾಧ್ಯಮ ಶಾಲೆಗಳನ್ನು ಬೆಳೆಸುವ ಗುರಿ ನಮ್ಮದಾಗಿದೆ ಎಂದರು.
ಈ ಸಂದರ್ಭದಲ್ಲಿ ದಾನಿಗಳಾದ ಕಾರ್ಕಳ ಟೈಗರ್ಸ್ ಸಂಸ್ಥೆಯ ಮಾಲಕ ಬೋಳ ಪ್ರಸಾದ್ ಕಾಮತ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ , ರಾಮದಾಸ್ ಪ್ರಭು,ಅಮ್ಮನ ನೆರವು ಟ್ರಸ್ಟ್ ನ ಅವಿನಾಶ್ ಶೆಟ್ಟಿ, ದೇವೇಂದ್ರ ನಾಯಕ್, ಬೋಳ ಜಯವಂತ ಕಾಮತ್ ಉಪಸ್ಥಿತರಿದ್ದರು.
ಸುಮಾರು 2500 ಸಾವಿರ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ರಾಜೇಂದ್ರ ಭಟ್ ಸ್ವಾಗತಿಸಿ, ನಿರೂಪಿಸಿದರು. ದೇವದಾಸ್ ಕೆರೆಮನೆ ವಂದಿಸಿದರು