ಕಾರ್ಕಳ:ಸಾಣೂರು-ಬಿಕರ್ನ ಕಟ್ಟೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿನ ಸಾಣೂರು ಗ್ರಾಮದ ಮುರತಂಗಡಿಯ ಪದವಿಪೂರ್ವ ಕಾಲೇಜಿಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಯ ಒಂದು ಬದಿಯ ಮಣ್ಣು ಮಳೆಗೆ ಕೊಚ್ಚಿಹೋಗಿ ಭಾರೀ ಆಳದ ಕಂದಕ ಸೃಷ್ಟಿಯಾಗಿತ್ತು. ಇದೇ ದಾರಿಯಾಗಿ ನಿತ್ಯ 500 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಓಡಾಟ ನಡೆಸುತ್ತಿದ್ದು ಇದು ಅಪಾಯಕ್ಕೆ ಆಹ್ವಾನಿಸುವಂತಿತ್ತು.ಕಳೆದ 6 ತಿಂಗಳಿನಿಂದ ಈ ಗುಂಡಿಯನ್ನು ಗುತ್ತಿಗೆ ವಹಿಸಿಕೊಂಡ ಕಂಪೆನಿ ಮುಚ್ಚದೇ ನಿರ್ಲಕ್ಷ್ಯ ವಹಿಸಿತ್ತು. ಇದನ್ನು ದುರಸ್ತಿಪಡಿಸುವಂತೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯು ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಬಳಿಕ ಹೆದ್ದಾರಿ ಹೋರಾಟ ಸಮಿತಿಯ ಮುಖಂಡ ಸಾಣೂರು ನರಸಿಂಹ ಕಾಮತ್ ಅವರ ನಿರಂತರ ಹೋರಾಟದ ಫಲವಾಗಿ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರವು 6 ಅಡಿ ಆಳದ ಅಪಾಯಕಾರಿ ಕಂದಕವನ್ನು ಮಣ್ಣಿನಿಂದ ಮುಚ್ಚಿಸಿದೆ.
ಗುತ್ತಿಗೆ ವಹಿಸಿಕೊಂಡ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯು ಕಾಮಗಾರಿಯಲ್ಲಿ ನಿರಂತರ ನಿರ್ಲಕ್ಷ್ಯ ತೋರುತ್ತಿದ್ದು ಇದರ ವಿರುದ್ಧ ಮುಂದಿನ ದಿನಗಳಲ್ಲಿ ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಸಾಣೂರು ನರಸಿಂಹ ಕಾಮತ್ ಎಚ್ಚರಿಸಿದ್ದಾರೆ.