ಕಾರ್ಕಳ: ಬ್ಯಾಂಕಿನ ಹಣ ಎಗರಿಸಲು ವಂಚಕರು ನಾನಾ ತಂತ್ರಗಳನ್ನು ಕಂಡುಕೊಳ್ಳುತ್ತಿದ್ದು,ವಂಚಕರ ಮೋಸದ ಜಾಲಕ್ಕೆ ಸಿಲುಕಿ ಸಾಕಷ್ಟು ಜನ ಹಣ ಕಳೆದುಕೊಂಡವರಿದ್ದಾರೆ.
ನಾವು ಬ್ಯಾಂಕಿನವರು ಎಂದು ಕರೆ ಮಾಡಿ ವೈಯಕ್ತಿಕ ದಾಖಲೆಗಳನ್ನು ಖಚಿತಪಡಿಸಿ ಕೊನೆಗೆ ಪಿನ್ ನಂಬರ್ ಪಡೆದು ಹಣ ದೋಚಿದ ಸಾಕಷ್ಟು ಪ್ರಕರಣಗಳ ನಡುವೆ,ಇದೀಗ ಅಮಾಯಕರ ವಾಟ್ಸಾಪ್ ನಂಬರನ್ನೇ ಹ್ಯಾಕ್ ಮಾಡಿ ನಕಲಿ ಬ್ಯಾಂಕ್ ಲಿಂಕ್ ಸೃಷ್ಟಿಸಿ ಪತ್ರಕರ್ತ ಸೇರಿ ಕಾರ್ಕಳದ ಹಲವರಿಗೆ ವಂಚಿಸಲು ಯತ್ನಿಸಿದ ಪ್ರಕರಣ ನಡೆದಿದೆ.
ಯೂನಿಯನ್ ಬ್ಯಾಂಕಿನ ಲೋಗೋವನ್ನು ವಾಟ್ಸಾಪ್ ಡಿಪಿಯಲ್ಲಿ ಬಳಸಿಕೊಂಡು ವಾಟ್ಸಾಪ್ ಗಳಿಗೆ ಆಧಾರ್ ಅಪ್ಡೇಡ್ ಮಾಡುವ ನಕಲಿ ಲಿಂಕ್ ಕಳಿಸಲಾಗಿದೆ. ಈ ನಂಬರಿನ ಮೂಲ ಕೆದಕಲು ಪತ್ರಕರ್ತರೊಬ್ಬರು ಕರೆ ಮಾಡಿದಾಗ ಅದು ಬೈಂದೂರಿನ ಮಹಿಳೆಯೊಬ್ಬರ ಸಿಮ್ ಕಾರ್ಡ್ ಆಗಿತ್ತು. ಬ್ಯಾಂಕಿನ ನಕಲಿ ಲಿಂಕನ್ನು ನಿಮ್ಮ ವಾಟ್ಸಾಪ್ ಮೂಲಕ ಕಳುಹಿಸಲಾಗಿದೆ ಎಂದು ಪ್ರಶ್ನಿಸಿದಾಗ,ನನಗೆ ಈ ವಿಚಾರ ಗೊತ್ತಿಲ್ಲ, ನಾನು 7 ನೇ ತರಗತಿ ಕಲಿತಿದ್ದು, ಶೈಕ್ಷಣಿಕ ಉದ್ದೇಶಕ್ಕಾಗಿ ವಾಟ್ಸಾಪ್ ಮೊಬೈಲ್ ನನ್ನ ಮಕ್ಕಳ ಬಳಿ ಕೊಟ್ಟಿದ್ದೆ, ಕಾರ್ಕಳದಿಂದ ಹಲವಾರು ಮಂದಿ ಕರೆ ಮಾಡಿದ್ದಾರೆ ಎಂಬುವುದಾಗಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ತಾನು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.ಇತ್ತ ವಂಚಕ ಇನ್ನೊಂದು ಮೊಬೈಲ್ ಮೂಲಕ ಹಲವರಿಗೆ ನಕಲಿ ಲಿಂಕ್ ಕಳುಹಿಸಿದ ಪ್ರಕರಣ ವರದಿಯಾಗಿದೆ.
ಬ್ಯಾಂಕುಗಳ ಲೋಗೋ ವನ್ನು ಡಿಪಿಯಾಗಿ ಬಳಸಿಕೊಂಡು ಜನರಲ್ಲಿ ವಿಶ್ವಾಸ ಮೂಡಿಸಿ ನಿಮ್ಮ ಹಣ ದೋಚಲು ವಂಚಕರು ಹೊಂಚುಹಾಕಿ ಕುಳಿತಿರುತ್ತಾರೆ. ನೀವು ಇದನ್ನೇ ನಂಬಿ ಆಧಾರ್ ಕಾರ್ಡ್ ಲಿಂಕ್ ಮಾಡಲು ಮುಂದಾದರೆ ನೀವು ಕ್ಷಣಾರ್ಧದಲ್ಲಿ ನಿಮ್ಮ ಹಣ ಕಳೆದುಕೊಳ್ಳುವುದು ಗ್ಯಾರಂಟಿ.
ಬ್ಯಾಂಕಿನವರು ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಕೇಳುವುದಿಲ್ಲ ಹಾಗೂ ವೈಯಕ್ತಿಕವಾಗಿ ನಿಮಗೆ ಎಂದಿಗೂ ಕರೆ ಮಾಡುವುದಿಲ್ಲ. ಆದ್ದರಿಂದ ಯಾವುದೇ ನಕಲಿ ಲಿಂಕ್ ಅಥವಾ ಕರೆಗಳಿಗೆ ಉತ್ತರಿಸದೇ ನಿರ್ಲಕ್ಷ್ಯಿಸಿದರೆ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.














