ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ಭಯೋತ್ಪಾದಕರು ಮತ್ತು ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಸೇನಾಧಿಕಾರಿ ಸೇರಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ರಾಷ್ಟ್ರೀಯ ರೈಫಲ್ಸ್ (ಆರ್ಆರ್) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ (ಜೆಕೆ ಪೊಲೀಸ್) ವಿಶೇಷ ಕಾರ್ಯಾಚರಣೆ ಗ್ರೂಪ್ ಸಿಬ್ಬಂದಿ ದೇಸಾ ಅರಣ್ಯ ಪ್ರದೇಶದ ಧರಿ ಗೋಟೆ ಉರರಬಾಗಿಯಲ್ಲಿ ರಾತ್ರಿ 7.45 ರ ಸುಮಾರಿಗೆ ಜಂಟಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಎನ್ಕೌಂಟರ್ ಪ್ರಾರಂಭವಾಗಿದೆ ಎಂದು ವರದಿಗಳು ತಿಳಿಸಿವೆ.
ಆರಂಭದಲ್ಲಿ 20 ನಿಮಿಷಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಅಧಿಕಾರಿ ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶಕ್ಕೆ ಹೆಚ್ಚುವರಿ ಪಡೆಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ಕೊನೆಯದಾಗಿ ವರದಿಗಳು ಬಂದಾಗ ಕಾರ್ಯಾಚರಣೆ ಮುಂದುವರೆದಿದೆ ಎಂದು ಸೇನೆ ತಿಳಿಸಿದೆ.