ನವದೆಹಲಿ: ಮೈಕ್ರೋಸಾಫ್ಟ್ನ ವಿಂಡೋಸ್ನಲ್ಲಿ ಇಂದು ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ವಿಶ್ವದಾದ್ಯಂತ ಕೋಟ್ಯಂತರ ಬಳಕೆದಾರರು ಪರದಾಡುವಂತಾಗಿದೆ.
ಇAದು ಬೆಳಗ್ಗೆ ಕಂಪ್ಯೂಟರ್, ಲ್ಯಾಪ್ಟಾಪ್ ರಿಸ್ಟಾರ್ಟ್ ಆಗಿದ್ದು, ಬಳಿಕ ಬ್ಲೂ ಸ್ಕ್ರೀನ್ ತೆರೆದುಕೊಂಡು ತಾಂತ್ರಿಕ ಸಮಸ್ಯೆ ತೋರುತ್ತಿದೆ. ಆಪರೇಟಿಂಗ್ ಸಿಸ್ಟಮ್ ಸಮಸ್ಯೆಯಲ್ಲಿ ಸಿಲುಕಿದೆ ಎಂಬ ಸಂದೇಶ ನೀಲಿ ಬಣ್ಣದ ಸಂದೇಶ ಡಿಸ್ಪ್ಲೇಯಲ್ಲಿ ಮೂಡಿರುವುದಾಗಿ ಅನೇಕ ಬಳಕೆದಾರರು ತಿಳಿಸಿದ್ದಾರೆ.
ಮೈಕ್ರೋಸಾಫ್ಟ್ ಸೇವೆಗಳಲ್ಲಿನ ಈ ತಾಂತ್ರಿಕ ಸಮಸ್ಯೆ ವಿಮಾನಯಾನ, ಬ್ಯಾಂಕುಗಳು ಸೇರಿ ವಿಶ್ವದಾದ್ಯಂತದ ಹಲವು ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಸ್ಪೈಸ್ ಜೆಟ್, ಅಕಾಸಾ ಏರ್ಲೈನ್ಸ್ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಸೇರಿದಂತೆ ಭಾರತೀಯ ವಿಮಾನಯಾನ ಸಂಸ್ಥೆಗಳೂ ತೊಂದರೆಗೆ ಒಳಗಾಗಿವೆ. ಇದು ವಿಮಾನ ರದ್ದತಿ ಮತ್ತು ವಿಳಂಬಕ್ಕೆ ಕಾರಣವಾಗಿದೆ.
ತಾಂತ್ರಿಕ ಸಮಸ್ಯೆಯಿಂದಾಗಿ ಹೈದರಾಬಾದ್ ಏರ್ಪೋರ್ಟ್ನಲ್ಲಿ ಕೈಬರಹದಲ್ಲೇ ಬೋರ್ಡಿಂಗ್ ಪಾಸ್ ವಿತರಣೆ ಮಾಡಲಾಗುತ್ತಿದೆ. ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಸೇವೆಯಲ್ಲೂ ವ್ಯತ್ಯಯವಾಗಿದೆ. ಸ್ಕೈ ನ್ಯೂಸ್, ಆಸ್ಟ್ರೇಲಿಯಾದ ಎಬಿಸಿ ನ್ಯೂಸ್ ಪ್ರಸಾರ ಸ್ಥಗಿತಗೊಂಡಿದೆ. ಬ್ರಿಟನ್ನಲ್ಲೂ ರೈಲು ಸೇವೆ ಸ್ಥಗಿತವಾಗಿದೆ. ಭಾರತದ ಐಟಿ ಇಲಾಖೆಯಿಂದ ಮೈಕ್ರೋಸಾಫ್ಟ್ ಸಂಸ್ಥೆ ಜೊತೆ ಸಂಪರ್ಕ ಸಾಧಿಸಲಾಗುತ್ತಿದೆ.
ಭಾರತದ ಇಂಡಿಗೋ, ಸ್ಪೈಸ್ಜೆಟ್ ಮತ್ತು ಆಕಾಶ ಏರ್ ಬುಕಿಂಗ್, ಚೆಕ್-ಇನ್ ಮತ್ತು ಫ್ಲೈಟ್ ನವೀಕರಣಗಳ ಸೇವೆ ಮೇಲೆ ಪರಿಣಾಮ ಬೀರಿದೆ. ದೆಹಲಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಸಮಸ್ಯೆ ತಲೆದೋರಿದೆ. ಸಮಸ್ಯೆ ಕುರಿತು ಪ್ರತಿಕ್ರಿಯಿಸಿರುವ ಮೈಕ್ರೋಸಾಫ್ಟ್, ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
