ನವದೆಹಲಿ: ಸರ್ಕಾರಿ ನೌಕರರು ಆರೆಸ್ಸೆಸ್ ನಲ್ಲಿ ತೊಡಗಿಕೊಳ್ಳುವುದಕ್ಕೆ ದಶಕಗಳ ಹಿಂದೆ ಜಾರಿಗೊಳಿಸಲಾಗಿದ್ದ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ.
1966 ರ ನವೆಂಬರ್ 30 ರಂದು ಕೇಂದ್ರ ಸರ್ಕಾರವು ಸರ್ಕಾರಿ ನೌಕರರು RSS ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜುಲೈ 9 ರಂದು ಇಂದಿರಾ ಗಾಂಧಿ ಆಡಳಿತದಲ್ಲಿ ವಿಧಿಸಿದ್ದ ನಿಷೇಧವನ್ನು ತೆಗೆದುಹಾಕಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಸಿಬ್ಬಂದಿ ಸಚಿವಾಲಯದ ಆದೇಶದ ಫೋಟೋವನ್ನು ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, 58 ವರ್ಷಗಳ ಹಿಂದೆ, ಸರ್ಕಾರಿ ನೌಕರರು RSS ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿ 1966 ರಲ್ಲಿ ಹೊರಡಿಸಲಾದ ಅಸಂವಿಧಾನಿಕ ಆದೇಶವನ್ನು ಮೋದಿ ಸರ್ಕಾರ ಹಿಂತೆಗೆದುಕೊಂಡಿದೆ ಎಂದಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, 1948 ರಲ್ಲಿ ಗಾಂಧಿ ಅವರ ಹತ್ಯೆಯಾದ ಬಳಿಕ ಸರ್ದಾರ್ ಪಟೇಲರು RSS ಫೆಬ್ರವರಿಯಲ್ಲಿ ನಿಷೇಧಿಸಿದ್ದರು. ನಂತರದಲ್ಲಿ ಆರ್‌ಎಸ್‌ಎಸ್ ಒಳ್ಳೆಯ ನಡತೆಯನ್ನು ಖಚಿತಪಡಿಸಿದ್ದ ಕಾರಣ ನಿಷೇಧವನ್ನು ಹಿಂಪಡೆಯಲಾಗಿತ್ತು. ಇಷ್ಟೆಲ್ಲಾ ಘಟನೆಗಳಾದ ಬಳಿಕವೂ RSS ನಾಗ್ಪುರದ ತನ್ನ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿರಲಿಲ್ಲ. 1966 ರಲ್ಲಿ ಮತ್ತೆ ನಿಷೇಧ ವಿಧಿಸಲಾಗಿತ್ತು ಎಂದಿದ್ದಾರೆ.
ರಮೇಶ್ ಅವರು ನಿಷೇಧವನ್ನು ಹಿಂತೆಗೆದುಕೊಳ್ಳುವುದನ್ನು ಖಂಡಿಸಿದ್ದಾರೆ ಮತ್ತು “ಜೂನ್ 4, 2024 ರ ನಂತರ, ಜೈವಿಕವಾಗಿ ಜನಿಸದ ವ್ಯಕ್ತಿ ಎಂದು ಸ್ವಯಂ ಘೋಷಿಸಿಕೊಂಡಿರುವ ಪ್ರಧಾನಮಂತ್ರಿ ಮತ್ತು ಆರ್‌ಎಸ್‌ಎಸ್ ನಡುವಿನ ಸಂಬಂಧಗಳು ಹದಗೆಟ್ಟಿದ್ದು, ಈ ಸಮಯದಲ್ಲೇ 58 ವರ್ಷಗಳ ನಿಷೇಧದ ಕ್ರಮ ಹಿಂಪಡೆದಿರುವ ನಿರ್ಧಾರವನ್ನು ರಮೇಶ್ ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಈಗ ನಿಕ್ಕರ್‌ಗಳಲ್ಲಿ ಬರಬಹುದು ಎಂದು ನಾನು ಭಾವಿಸುತ್ತೇನೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ
