ಕಾರ್ಕಳ: ಆಮೆಗತಿಯಲ್ಲಿ ಸಾಗುತ್ತಿರುವ ಕಾರ್ಕಳ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆವಾಂತರ ಮತ್ತೆ ಮುಂದುವರಿದಿದ್ದು, ಸಾಣೂರು ಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಗುಡ್ಡ ಅಗೆದ ಪರಿಣಾಮ ಗುಡ್ಡ ಜರಿತದಿಂದ ಈಗಾಗಲೇ ಪಶುವೈದ್ಯ ಆಸ್ಪತ್ರೆ ಕಟ್ಟಡ ಈಗಾಗಲೇ ಧರಾಶಾಯಿಯಾಗಿದ್ದು, ಮತ್ತೆ ಗುಡ್ಡ ಜರಿತಕ್ಕೆ ಪಕ್ಕದಲ್ಲಿರುವ 220 ಕೆ.ವಿ ಹೈ ಟೆನ್ಷನ್ ವಿದ್ಯುತ್ ಗೋಪುರವೇ ಕುಸಿದು ಬೀಳುವ ಸ್ಥಿತಿ ಎದುರಾಗಿದೆ. ಮಳೆ ಪರಿಸ್ಥಿತಿ ಹಿಗೆಯೇ ಮುಂದುವರಿದರೆ ವಿದ್ಯುತ್ ಟವರ್ ಕುಸಿಯುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಇದರಿಂದ ಅಕ್ಕಪಕ್ಕ ನಿವಾಸಿಗಳು ಜೀವ ಭಯದಿಂದಲೇ ಜೀವನ ನಡೆಸುವಂತಾಗಿದೆ.
ಕಳೆದೊಂದು ವರ್ಷದಿಂದ ಸಾಣೂರು ಯುವಕ ಮಂಡಲದ ಮೈದಾನದ ಬಳಿ ಹೆದ್ದಾರಿ ಕಾಮಗಾರಿ ವೇಳೆ ಕಡಿದಿರುವ ಗುಡ್ಡ ಜರಿಯುತ್ತಿರುವ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ ನಿರಂತರವಾಗಿ ಆಗ್ರಹಿಸುತ್ತಿದ್ದರೂ ಕಿವಿಗೊಡದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಳೆದ ಜೂನ್ 12 ಶುಕ್ರವಾರದಂದು ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶಾಸಕರು ಮತ್ತು ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಅಪಾಯಕಾರಿ ಜಾಗಕ್ಕೆ ಭೇಟಿ ನೀಡಿ ಒಂದು ವಾರದ ಒಳಗೆ ಕಾಮಗಾರಿಯನ್ನು ಪ್ರಾರಂಭಿಸಿ ಮೂರು ತಿಂಗಳ ಒಳಗೆ ತಡೆಗೋಡೆ ನಿರ್ಮಾಣ ಕಾರ್ಯವನ್ನು ಮುಗಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆಯನ್ನು ನೀಡಿದರೂ ಕ್ಯಾರೇ ಎನ್ನದ ಇಲಾಖೆ ಆ ಬಳಿಕ ಕಳೆದ 12 ದಿನಗಳಿಂದ ಭಾರಿ ಮಳೆ ಸುರಿದು ಗುಡ್ಡದ ಇನ್ನಷ್ಟು ಭಾಗದ ಮಣ್ಣು ಜರಿದು ರಸ್ತೆಗೆ ಬೀಳುತ್ತಿದ್ದರೂ ಯಾವುದೇ ರಕ್ಷಣಾತ್ಮಕ ಕೆಲಸ ಕಾರ್ಯಗಳನ್ನು ಇನ್ನೂ ಕೈಗೆತ್ತಿಕೊಂಡಿಲ್ಲ.
ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಸೂಚನೆಯ ಹೊರತಾಗಿಯೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಬೇಜವಾಬ್ದಾರಿಯಿಂದ ವರ್ತಿಸಿ ಜನರ ಜೀವ ಮತ್ತು ಸುತ್ತಿನ ಬಗ್ಗೆ ಲಕ್ಷ್ಯ ವಹಿಸದೆ ಹೆದ್ದಾರಿ ಕಾಮಗಾರಿಗಳನ್ನು ನಿರ್ವಹಿಸಿದರೆ ಮುಂದೆ ಆಗುವ ಎಲ್ಲಾ ಭಾರಿ ಅನಾಹುತಕ್ಕೆ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಭೂ ಮಾಲಕರ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಎಚ್ಚರಿಸಿದ್ದಾರೆ.

`