Share this news

ಬೆಂಗಳೂರು : ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವವರಿಗೆ ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ ಪ್ರಕಟಿಸಿದೆ.

ಭಾರತ ಚುನಾವಣಾ ಆಯೋಗವು ಅರ್ಹತಾ ದಿ. 01.01.2025 ರಂತೆ ಭಾವಚಿತ್ರ ಸಹಿತ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ರ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಪೂರ್ವ ಪರಿಷ್ಕರಣೆ ಚಟುವಟಿಕೆಗಳ ಸಮಯದಲ್ಲಿ ರಾಜ್ಯದ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿಗಳು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ ಮತ್ತು 18 ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಾರ್ವಜನಿಕರು ವಿಶೇಷ ಅಭಿಯಾನಗಳ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಹಾಗೂ ಅವಶ್ಯವಿರುವ ತಿದ್ದುಪಡಿ, ಸೇರ್ಪಡೆ ಹಾಗೂ ತೆಗೆದುಹಾಕುವಿಕೆಗಳಿಗೆ ಅರ್ಜಿಗಳನ್ನು ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿಗಳು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಸಾರ್ವಜನಿಕರು ಅರ್ಜಿ ನಮೂನೆ 6 ಮತ್ತು8 ಗಳನ್ನು ಸಲ್ಲಿಸುವಾಗ ಸ್ವಯಂಪ್ರೇರಿತವಾಗಿ ಆಧಾರ್ ಸಂಖ್ಯೆಗಳನ್ನು ಒದಗಿಸಬಹುದಾಗಿದೆ.

ಎಲ್ಲಾ ರೀತಿಯ ಚುಣಾವಣಾ ಸಂಬಂಧಿತ ಸೇವೆಗಳಿಗಾಗಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ನಲ್ಲಿ Voter Helpline application ಮೂಲಕ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಆಗಸ್ಟ್ 20 ರಿಂದ ಅಕ್ಟೋಬರ್ 18 ರ ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ/ಮರು ಹೊಂದಾಣಿಕೆ ಸೇರಿದಂತೆ ಮತದಾರರ ಪಟ್ಟಿ/ಮತದಾರರ ಗುರುತಿನ ಚೀಟಿಗಳಲ್ಲಿನ ಲೋಪದೋಷಗಳನ್ನು ತೆಗೆದುಹಾಕುವುದು. ಅಗತ್ಯವಿರುವ ಕಡೆ ಮತದಾರರ ಪಟ್ಟಿಯಲ್ಲಿನ ಗುಣಮಟ್ಟವಿಲ್ಲದ ಭಾವಚಿತ್ರಗಳನ್ನು ಬದಲಾಯಿಸಿ ಉತ್ತಮ ಗುಣಮಟ್ಟದ ಭಾವಚಿತ್ರಗಳನ್ನು ಖಾತ್ರಿಪಡಿಸುವುದು. ವಿಭಾಗ/ಭಾಗಗಳ ಮರುಹೊಂದಾಣಿಕೆ ಹಾಗೂ ಪ್ರಸ್ತಾಪಿತ ವಿಭಾಗ/ಭಾಗಗಳ ಮತಗಟ್ಟೆಗಳ ಸ್ಥಳವನ್ನು ಅಂತಿಮಗೊಳಿಸುವಿಕೆ ಮತ್ತು ಮತಗಟ್ಟೆಗಳ ಪಟ್ಟಿಗಳಿಗೆ ಅನುಮೋದನೆ ಪಡೆದುಕೊಳ್ಳುವುದು. ನ್ಯೂನತೆಗಳ ಗುರುತಿಸುವಿಕೆ ಮತ್ತು ಅಂತಹ ನ್ಯೂನತೆಗಳನ್ನು ನಿವಾರಿಸಲು ಕಾರ್ಯತಂತ್ರ ಮತ್ತು ಕಾಲಾವಧಿಯನ್ನುಅಂತಿಮಗೊಳಿಸುವುದು ಮತ್ತು ನಿಯಂತ್ರಣ ಕೋಷ್ಟಕದ ನವೀಕರಣ ನಡೆಯಲಿದೆ.

ಅಕ್ಟೋಬರ್ 19 ರಿಂದ 28 ರ ವರೆಗೆ ಸಮಗ್ರ ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.

ಅಕ್ಟೋಬರ್ 29 ರಂದು ಸಮಗ್ರ ಕರಡು ಮತದಾರರ ಪಟ್ಟಿಯ ಪ್ರಕಟಿಸಲಿದ್ದು, ಸಾರ್ವಜನಿಕರು ತಮ್ಮ ಲೋಪದೋಷಗಳ ಕುರಿತಾಗಿ ಅಕ್ಟೋಬರ್ 29 ರಿಂದ ನವೆಂಬರ್ 28 ರ ವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಕಾಶ ಇರುತ್ತದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿಯನ್ನು ಡಿಸೆಂಬರ್ 24 ರೊಳಗೆ ಮುಗಿಸಿ 2025 ರ ಜನವರಿ1 ರೊಳಗೆ ಮತದಾರರ ಪಟ್ಟಿಗಳ ಗುಣಮಟ್ಟ ಪರಿಶೀಲನೆ ಮಾಡುವುದು ಹಾಗೂ ಅಂತಿಮ ಪ್ರಕಟಣೆಗಾಗಿ ಆಯೋಗದ ಅನುಮತಿಯನ್ನು ಪಡೆದು 06.01.2025 ರಂದು ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆ ಮಾಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                        

                          

                        

                          

 

`

Leave a Reply

Your email address will not be published. Required fields are marked *