ನವದೆಹಲಿ: ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯನಿಗೆ ಮಾಡುವ ಎಲ್ಲಾ ಅಪಮಾನಗಳನ್ನು ಎಸ್‌ಸಿ/ಎಸ್‌ಟಿ (ದೌರ್ಜನ್ಯಗಳ ತಡೆ) ಕಾಯ್ದೆ, 1989ರಡಿ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ. ಜಾತಿ ಗುರುತನ್ನು ಆಧರಿಸಿ ಮಾಡುವ ಅಪಮಾನವನ್ನು ಮಾತ್ರ ಆ ಸೆಕ್ಷನ್‌ನಡಿ ಅಪರಾಧವೆಂದು ಪರಿಗಣಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ಯೂಟ್ಯೂಬ್‌ನಲ್ಲಿ ‘ಮರುನಾಡನ್ ಮಲಯಾಳಿ’ ಎಂಬ ವೀಡಿಯೊ ಚಾನೆಲ್ ನಡೆಸುತ್ತಿದ್ದ ಶಹಜಹಾನ್ ಝಕರಿಯಾಗೆ ನಿರೀಕ್ಷಣಾ ಜಾಮೀನನ್ನು ನೀಡಿದ ಸಂದರ್ಭ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಶಾಸಕ ಪಿ.ವಿ. ಶ್ರೀನಿಜಿನ್ ಎಂಬವರು ತನ್ನ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಯಲ್ಲಿ ಕೇರಳ ಹೈಕೋರ್ಟ್ ತನಗೆ ನಿರೀಕ್ಷಣಾ ‘ಜಾಮೀನು ನಿರಾಕರಿಸಿರುವುದನ್ನು ಪ್ರಶ್ನಿಸಿ ಝಕರಿಯಾ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಮರುನಾಡನ್ ಮಲಯಾಳಿ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಿದ ವೀಡಿಯೊದಲ್ಲಿ ಝಕರಿಯಾ ಅವರು ತನ್ನನ್ನು ಉದ್ದೇಶಪೂರ್ವಕವಾಗಿ ಅಪಮಾನಿಸಲಾಗಿದೆ ಎಂದು ಆರೋಪಿಸಿ ಶ್ರೀನಿಜಿನ್ ಅವರು ಝಕರಿಯಾ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಾಗುವಂತೆ ಮಾಡಿದ್ದರು.
ಇಂದು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು, ಪರಿಶಿಷ್ಟ ಜಾತಿ/ಪಂಗಡದ ಸದಸ್ಯನನ್ನು ಆತನ ಜಾತಿ ಗುರುತಿನ ಉದ್ದೇಶದಿಂದ ಸಾರ್ವಜನಿಕರ ಎದುರು ಅಪಮಾನಿಸಿದಲ್ಲಿ ಅಥವಾ ಬೆದರಿಸಿದಲ್ಲಿ ಅದು ಎಸ್‌ಸಿ/ – ಎಸ್‌ಟಿ ಕಾಯ್ದೆ ಸೆಕ್ಷನ್ 3 (1) (ಆರ್) ಅಡಿ ಅಪರಾಧವೆನಿಸುತ್ತದೆ. ಆದರೆ ಎಸ್‌ಸಿ/ಎಸ್‌ಟಿ ಸಮುದಾಯದ ಸದಸ್ಯನಿಗೆ ಮಾಡಲಾಗುವ ಪ್ರತಿಯೊಂದು ಉದ್ದೇಶಪೂರ್ವಕವಾಗಿ ಮಾಡುವ ಅಪಮಾನ ಅಥವಾ ಬೆದರಿಕೆಯನ್ನು ಜಾತಿ ಅಧಾರಿತ ಅಪಮಾನವೆಂದು ಪರಿಗಣಿಸಲು, ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತು.
`